ADVERTISEMENT

ಆರೋಪಿಗಳಿಗೇಕೆ ಬಿಜೆಪಿ ರಕ್ಷಣೆ ?

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ಬಳ್ಳಾರಿ ಜಿಲ್ಲೆಯಲ್ಲಿ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿಯವರ ಎಎಂಸಿ ಕಂಪೆನಿಯಿಂದ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಆರೋಪಗಳ ಬಗೆಗೆ ಸಿಇಸಿ ವರದಿಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ತನಿಖೆ ನಡೆಸಬೇಕೆಂದು ಸಿಬಿಐಗೆ ಆದೇಶ ನೀಡಿದ ಮೇಲೆ ಮುಖ್ಯಮಂತ್ರಿ ಸದಾನಂದ ಗೌಡರು ತನಿಖೆಗೆ ಸಹಕಾರ ನೀಡುವುದಾಗಿ ಹೇಳಿರುವುದು ಸರಿಯಷ್ಟೇ.

ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಬಗ್ಗೆ ಕಾಂಗ್ರೆಸ್ ಪಕ್ಷ ಸತತವಾಗಿ  ಸಿಬಿಐ ತನಿಖೆ ಒಪ್ಪಿಸಬೇಕೆಂದು ಆಗ್ರಹಪಡಿಸಿ ದಾಗಲೆಲ್ಲ ಬಿಜಿಪಿ, ಈ ಆಪಾದನೆ ರಾಜಕೀಯ ಪ್ರೇರಿತವೆಂದೂ, ಸಿಬಿಐ, ಒಂದು ಕಾಂಗ್ರೆಸ್ ತನಿಖಾ ಸಂಸ್ಥೆಯೆಂದೂ ಟೀಕಿಸುತಿತ್ತು.

ಈಗ ಸುಪ್ರೀಂ ಕೋರ್ಟ್ ಅಕ್ರಮ ಗಣಿಗಾರಿಕೆ ಯನ್ನು ತನಿಖೆ ಮಾಡುವಂತೆ ಸಿಬಿಐಗೆ ಒಪ್ಪಿಸಿರು ವುದು ರಾಜ್ಯ ಬಿಜೆಪಿ ನಾಯಕರಿಗೆ ಕಪಾಳ ಮೋಕ್ಷ ಮಾಡಿದಂತಲ್ಲವೇ? ಇದರಂತೆಯೇ, ಉಚ್ಚ ನ್ಯಾಯಾಲಯವು, ಮಾಲೇಗಾಂ ಬಾಂಬ್ ಪ್ರಕರಣದಲ್ಲಿ ಆಪಾದನೆಗೆ ಒಳಗಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್‌ಗೆ ಜಾಮೀನು ನಿರಾಕರಿಸಿದೆ.

ಪೊಲೀಸರು ಪ್ರಗ್ಯಾ ಸಿಂಗ್, ಕರ್ನಲ್ ಪುರೋಹಿತ್, ಸ್ವಾಮಿ ಅಸೀಮಾನಂದ ಅವರನ್ನು ಗುರುತರವಾದ ಆಪಾದನೆಯ ಮೇಲೆ ಬಂಧಿಸಿ ದಾಗಲೂ ಬಿಜೆಪಿ, ಇದೊಂದು ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ರಾಗ ಎಳೆದಿತ್ತು.

ಜೊತೆಗೆ ಯಡಿಯೂರಪ್ಪನವರ ಮೇಲೆ ಹಲವು ಆಪಾದನೆಗಳ ಬಗೆಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ, 2 ಜಿ ಪ್ರಕರಣದಲ್ಲಿ ಒಂದು ವರದಿಯ ಆಧಾರದ ಮೇಲೆ ಪದೇ ಪದೇ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗೃಹ ಸಚಿವ ಚಿದಂಬರಂರವರ ರಾಜೀನಾಮೆ ಕೇಳುವುದು ದ್ವಿಮುಖ ನೀತಿಯಲ್ಲವೆ? ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುವ ವರನ್ನು ಮತ್ತು ಬಾಂಬ್ ಪ್ರಕರಣಗಳಲ್ಲಿ ಭಾಗಿಯಾಗುವವರನ್ನು ಬಿಜೆಪಿ ರಕ್ಷಿಸುವುದೇಕೆ?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.