ADVERTISEMENT

ಇದು ಬೆಂಬಲ ಬೆಲೆಯೇ?

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST

ರಾಜ್ಯದಾದ್ಯಂತ ರಾಗಿ ಖರೀದಿ ಕೇಂದ್ರಗಳನ್ನು ತೆರೆದು ಒಂದು ತಿಂಗಳಾಗಿದ್ದರೂ ಬೆರಳೆಣಿಕೆಯ ರೈತರೂ ರಾಗಿ ಮಾರಾಟ ಮಾಡಿಲ್ಲ. ಖಾಸಗಿಯವರು ಸರ್ಕಾರದ ಬೆಂಬಲ ಬೆಲೆಗಿಂತ ಹೆಚ್ಚು ಬೆಲೆ ಕೊಟ್ಟು ಖರೀದಿಸುತ್ತಿರುವುದು ಇದಕ್ಕೆ ಕಾರಣ ಎಂದು ವರದಿಯಾಗಿದೆ.

ನಾಲ್ಕು ವರ್ಷಗಳ ಹಿಂದೆ ಸರ್ಕಾರವು ರಾಗಿಗೆ ಕ್ವಿಂಟಲ್‌ಗೆ ₹ 2,100 ಬೆಂಬಲ ಬೆಲೆ ಘೋಷಿಸಿದಾಗ ಒಂದೇ ತಿಂಗಳಲ್ಲಿ ರಾಜ್ಯದಾದ್ಯಂತ ಸರ್ಕಾರ ನಿರೀಕ್ಷಿಸಿದ್ದ ಪ್ರಮಾಣದಲ್ಲಿ ರಾಗಿ ಖರೀದಿ ಸಾಧ್ಯವಾಗಿತ್ತು. ಆಗ ಖಾಸಗಿಯವರು ಕ್ವಿಂಟಲ್ ರಾಗಿಗೆ ₹ 1,200- 1,300 ಕೊಡುತ್ತಿದ್ದುದರಿಂದ ಸರ್ಕಾರದ ಬೆಂಬಲ ಬೆಲೆಗೆ ರೈತರು ಜೋರಾಗೇ ಸ್ಪಂದಿಸಿದ್ದರು. 2016-17ನೇ ಸಾಲಿನಲ್ಲಿ ಇಡೀ ರಾಜ್ಯದಲ್ಲಿ ರಾಗಿ ಉತ್ಪಾದನೆ ಸಂಪೂರ್ಣ ನೆಲಕಚ್ಚಿ, ಕೆ.ಜಿ. ರಾಗಿಗೆ ₹ 40- 45 ಕೊಡುವ ಸ್ಥಿತಿ ಬಂದಿತು. ಈ ವರ್ಷ ರಾಗಿ ಫಸಲು ಚೆನ್ನಾಗಿ ಬಂದಿದೆ. ಸರ್ಕಾರದ ಬೆಂಬಲ ಬೆಲೆ ಕ್ವಿಂಟಲ್‌ಗೆ ₹ 2,300 ಇದ್ದರೆ, ಖಾಸಗಿಯವರು
₹ 3,000 ವರೆಗೆ ಕೊಡುತ್ತಿದ್ದಾರೆ.

ಈ ವರ್ಷ ರಾಗಿಯನ್ನು ಮನೆ ತುಂಬಿಸಿಕೊಳ್ಳಲು ರೈತರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೊಯ್ಲಿನ ಸಮಯಕ್ಕೆ ಕೆಲಸಗಾರರಿಗೆ ದಿನಕ್ಕೆ ₹ 500ರಿಂದ 700 ಕೂಲಿಯ ಜತೆಗೆ ಊಟ, ಎಲೆಅಡಿಕೆ ಕೊಟ್ಟು, ಬಿಟ್ಟರೆ ಸಿಗರು ಎಂದು ಆಟೊ–ಬೈಕ್‌ ಕಳುಹಿಸಿ ಕರೆಸಿಕೊಂಡಿದ್ದಾರೆ. ಕಣ ಮಾಡುವಾಗ ಇದ್ದಕ್ಕಿದ್ದಂತೆ ಮೋಡ ಕವಿಯುವುದು, ಮಳೆ ಹನಿಯುವುದು ಕಂಡು ಕಂಗೆಟ್ಟು ಊಟ, ನಿದ್ದೆ ಬಿಟ್ಟು ರಾಗಿ ಒಪ್ಪ ಮಾಡಿದ್ದಾರೆ. ಈಗ ಸರ್ಕಾರ ಕೊಡುವ ಬೆಂಬಲ ಬೆಲೆ ಅಬ್ಬಬ್ಬಾ ಎಂದರೆ ರೈತ ಮಾಡಿದ ಖರ್ಚಿಗೆ ಸಮವಾಗಬಹುದು. ಇದು ಸರ್ಕಾರದ ಗದ್ದುಗೆಗಳಲ್ಲಿ ಕುಳಿತಿರುವ ತಜ್ಞರಿಗೆ ತಿಳಿದಿಲ್ಲ ಎಂದೇನಲ್ಲ. ಗೊತ್ತಿರುವ ವಿಷಯದ ಮೇಲೆಯೇ ಸೆಮಿನಾರಿನ ಮೇಲೆ ಸೆಮಿನಾರು ಏರ್ಪಡಿಸುತ್ತಾ ಬುದ್ಧಿವಂತರ, ಅಧಿಕಾರಶಾಹಿಯ ಕೊನೆಯಿಲ್ಲದ ವ್ಯಾಖ್ಯಾನಗಳಿಗೆ ಸಮಯ ವ್ಯಯಿಸುತ್ತಾ ಇವರ ಊಟ, ಟಿಎ, ಡಿಎ ಎಂದು ಹೆಚ್ಚೇ ಖರ್ಚು ಮಾಡುತ್ತಾ ಕಾಲ ದೂಡುವ ಬದಲು, ಒಂದು ಸಣ್ಣ ಇಚ್ಛಾಶಕ್ತಿ ತೋರಿದರೆ ಸಾಕು. ರಾಗಿಯ ಬೆಂಬಲ ಬೆಲೆಯನ್ನು ಉತ್ತಮಪಡಿಸಿದರೆ ರೈತರಿಗೂ, ಪಡಿತರದಾರರಿಗೂ ಉಪಕಾರ ಮಾಡಿದಂತೆ.

ADVERTISEMENT

ವಿ. ಗಾಯತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.