ADVERTISEMENT

ಇದು ಯಾವ ನ್ಯಾಯ?

ಹರೀಶ್ ಶಾಕ್ಯ ಎಸ್., ಚಿಕ್ಕಬೇಗೂರು
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST

ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ವಿಶೇಷ ಯೋಜನೆ ಅಡಿ ಮೀಸಲಿಟ್ಟಿದ್ದ ಅನುದಾನದ ಪೈಕಿ ₹ 929 ಕೋಟಿಯನ್ನು ರೈತರ ಸಾಲ ಮನ್ನಾಕ್ಕೆ ಸರ್ಕಾರ ಬಳಸಿಕೊಂಡಿರುವುದು ವರದಿಯಾಗಿದೆ (ಪ್ರ.ವಾ., ಫೆ. 22).

ಸರ್ಕಾರವು ಪರಿಶಿಷ್ಟ ಸಮುದಾಯದವರ ಮೇಲೆ ಇಟ್ಟಿರುವ ಕಾಳಜಿ ಎಷ್ಟು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

‘ಬಡವರ ಪರ’ ಎಂದು ಹೇಳಿಕೊಳ್ಳುತ್ತಿರುವ ಸರ್ಕಾರದ ಈ ನಡೆ ಅಚ್ಚರಿ ಮೂಡಿಸಿದೆ. ಗಂಗಾ ಕಲ್ಯಾಣ ಯೋಜನೆ ಅನುಷ್ಠಾನ, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ಒದಗಿಸುವುದು, ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡುವುದು, ಸಮುದಾಯದ ಜನರಿಗೆ ಶಿಕ್ಷಣ, ವಸತಿ, ಗೃಹಸಾಲ, ಹೈನುಗಾರಿಕೆ, ಸ್ವ ಉದ್ಯೋಗ ಸೌಲಭ್ಯ ಕಲ್ಪಿಸುವುದು... ಹೀಗೆ ಈ ಸಮುದಾಯದವರ ಅಭಿವೃದ್ಧಿ ಯೋಜನೆಗಳಿಗಾಗಿ ವ್ಯಯಿಸಬೇಕಿದ್ದ ಹಣವನ್ನು ರೈತರ ಸಾಲ ಮನ್ನಾಕ್ಕೆ ಬಳಸಿರುವುದು ವಿಪರ್ಯಾಸ.

ADVERTISEMENT

ಈ ವರ್ಗದ ಜನರ ಬಳಿ ಆಸ್ತಿಯೇ ಇಲ್ಲದಿರುವುದರಿಂದ, ಇವರು ಸಾಲ ಮಾಡುವುದು ಕಡಿಮೆ. ಯಾವ ಬ್ಯಾಂಕ್ ತಾನೆ ಇವರಿಗೆ ಸಾಲ ಕೊಡುತ್ತದೆ? ಇನ್ನೊಬ್ಬರ ಜಮೀನಿನಲ್ಲಿ ಕೂಲಿ ಆಳುಗಳಾಗಿ ದುಡಿಯುವವರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು, ಆ ಜಮೀನುಗಳ ಮಾಲೀಕರ ಸಾಲ ಮನ್ನಾಗೆ ಬಳಸಿದ್ದು ಯಾವ ನ್ಯಾಯ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.