ADVERTISEMENT

ಇದೆಂಥಾ ಜಿಲ್ಲಾ ಉತ್ಸವ?

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 16:10 IST
Last Updated 16 ಫೆಬ್ರುವರಿ 2011, 16:10 IST

ನಾಲ್ಕು ದಿನಗಳ ತುಮಕೂರು ಜಿಲ್ಲಾ ಉತ್ಸವವು ಯಶಸ್ವಿ (?) ಯಾಗಿ ನಡೆದಿದೆಯೆಂದು ಆಯೋಜಕರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ. ಮಾಮೂಲಿ ಹೊಗಳು ಭಟ್ಟರೂ ಅವರಿಂದ ಉಪಕೃತರಾದವರೂ ಆಗಬಯಸುವವರೂ ಸಹ ಬೆನ್ನು ತಟ್ಟಿದ್ದಾರೆ.
ಕಳೆದ ಜಿಲ್ಲಾ ಉತ್ಸವದಲ್ಲಿ ಪಿ. ಶೇಷಾದ್ರಿಯವರನ್ನು ‘ಸನ್ಮಾನ’ಕ್ಕೆ ಆಹ್ವಾನಿಸಿದ್ದು ಅವರು ನನ್ನ ಚಿತ್ರಗಳಿಗೆ ಥಿಯೇಟರ್ ಒದಗಿಸಿಕೊಡಲು ನಿಮಗೆ ಸಾಧ್ಯವಾಗದಿದ್ದರೆ ಸನ್ಮಾನ ಬೇಡವೆಂದಿದ್ದರು. ಹೀಗಾಗಿ ಅವರು ಈ ಭಾರಿ ಅತ್ತೂ ಕರೆದು ಔತಣಕ್ಕೆ ಹೇಳಿಸಿಕೊಂಡರು. (ಅಳದಿದ್ದರೆ ತಾಯಿಯೂ ಹಾಲು ಕೊಡುವುದಿಲ್ಲವಂತೆ!) ಅಂತೂ ಚಿತ್ರೋತ್ಸವ ನಡೆಯಿತು. ಆದರೆ ರಾಷ್ಟ್ರಮನ್ನಣೆಗೆ ಪಾತ್ರರಾದ ಬರಗೂರರ ಚಿತ್ರ ಪ್ರದರ್ಶನವಾಯಿತೇ ಹೊರತು ಇದೇ ಜಿಲ್ಲೆಯವರಾದ ಅವರನ್ನು ಆಹ್ವಾನಿಸದೆ ಆಯೋಜಕರು ಬಹು ದೊಡ್ಡ ತಪ್ಪು ಮಾಡಿದ್ದಾರೆ. ರಾಜ್ಯದ ಆಡಳಿತ ಪಕ್ಷದ ಪರ ಅವರಿಲ್ಲದಿರುವುದು ಕಾರಣವಿರಬಹುದೇ?

ಸಂಸ್ಕೃತಿಯ ಹೆಸರಿನಲ್ಲಿ ವಿ.ವಿ.ಐ.ಪಿ., ವಿ.ಐ.ಪಿ. ಪಾಸುಗಳನ್ನು ಹಂಚಿ, ಶ್ರೀಮಂತ ಕಲಾವಿದರನ್ನೇ ಕರೆಸಿ ಸನ್ಮಾನ ಮಾಡಿ ಪುನೀತರಾದ ಜಿಲ್ಲಾಡಳಿತ ‘ಜಯ ಭಾರತ ಜನನಿಯ ತನುಜಾತೆ’ ಡ್ಯಾನ್ಸ್ ಮಾಡಿಸಿ ‘ಕುಳಿತು’ ಚಪ್ಪಾಳೆ ತಟ್ಟಿತು.

ಕವಿಗೋಷ್ಠಿಯಲ್ಲಿ ಮೂರು ವರ್ಷಗಳೂ ಆಹ್ವಾನ ಗಿಟ್ಟಿಸಿದವರು (ಎಷ್ಟೋ ಮಂದಿ ಕವಿಗಳೇ ಅಲ್ಲ) ಪಾಠ ಒಪ್ಪಿಸಿದ್ದಾರೆ. ಈ ಮಧ್ಯೆ ಉದ್ಘಾಟಕರಾದ ಕೆ.ಬಿ. ಸಿದ್ಧಯ್ಯನವರು ನಮ್ಮಂತಹ ಎಷ್ಟೋ ಮಂದಿ ಹೇಳಬೇಕು ಅಂದುಕೊಂಡದ್ದನ್ನು ಧೈರ್ಯವಾಗಿ ಹೇಳಿದ್ದಾರೆ. ಅಂತೂ ಜಿಲ್ಲಾ ಉತ್ಸವದಲ್ಲಿ ಜಾನಪದ ಮೆರವಣಿಗೆ ಭರ್ಜರಿಯಾಗಿತ್ತು.
-
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.