ADVERTISEMENT

ಉರ್ದು ಅಕಾಡೆಮಿ ಬರಖಾಸ್ತು ಪ್ರಶ್ನಾರ್ಹ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 19:30 IST
Last Updated 23 ಮಾರ್ಚ್ 2011, 19:30 IST


ಭಾರತದ ಅಧಿಕೃತ ಭಾಷೆಗಳಲ್ಲಿ ಒಂದಾದ ಹಾಗೂ ಕರ್ನಾಟಕದ ಅಲ್ಪಸಂಖ್ಯಾತರ ಮಾತೃಭಾಷೆಗಳಲ್ಲಿ ಒಂದಾದ ಉರ್ದು ಭಾಷೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಿ ಉರ್ದು ಸಾಹಿತ್ಯ ಅಕಾಡೆಮಿಯನ್ನು ಕರ್ನಾಟಕ ಸರ್ಕಾರ ಸ್ಥಾಪಿಸಿ ಮೂರು ದಶಕಗಳೇ ಉರುಳಿವೆ. ಇಷ್ಟು ಕಾಲ ಅದು ಕರ್ನಾಟಕ ಸರ್ಕಾರದ ಇತರ ಅಕಾಡೆಮಿಗಳಂತೆ ತನ್ನದೇ ಆದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಬಂದಿದೆ. ಅದರಲ್ಲೂ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯಕ್ರಮಗಳನ್ನು ನಡೆಸಿದೆ ಎಂಬುದನ್ನು ನಾನು ಗಮನಿಸಿದ್ದೇನೆ.

ಸರ್ಕಾರದ ಸ್ವಾಯತ್ತ ಸಂಸ್ಥೆಯಾದ, ಹಿಂದಿಗಿಂತ ಹೆಚ್ಚು ಕ್ರಿಯಾಶೀಲ ಸಂಸ್ಥೆಯಾದ ಈ ಅಕಾಡೆಮಿಯನ್ನು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಸರ್ಕಾರವು ಬರಖಾಸ್ತು ಮಾಡಿರುವುದಲ್ಲದೆ, ಅದನ್ನು ಅಲ್ಪಸಂಖ್ಯಾತರ ಇಲಾಖೆಗೆ ಸೇರಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಈ ಬೆಳವಣಿಗೆ ಉರ್ದು ಸಾಹಿತ್ಯ ಅಕಾಡೆಮಿಯ ಮೂಲ ಉದ್ದೇಶಕ್ಕೆ ಮಾರಕವಾಗಿದೆ. ಸರ್ಕಾರ ಹೀಗೆ ಅಕಾಡೆಮಿಯೊಂದನ್ನು ಬರಖಾಸ್ತು ಮಾಡಿರುವ ಕ್ರಮವು ಪ್ರಶ್ನಾರ್ಹವಾಗಿದೆ.

ಯಾವುದೇ ಕಾರಣಕ್ಕೂ ಉರ್ದು ಅಕಾಡೆಮಿಯನ್ನು ಇನ್ನಿತರ ಅಕಾಡೆಮಿಗಳಿಂದ ಬೇರ್ಪಡಿಸಬಾರದು. ಈ ಕುರಿತು ಫಕೀರ್ ಮಹಮದ್ ಕಟ್ಪಾಡಿ (‘ಉರ್ದು ಅಕಾಡೆಮಿಗೆ ಹಿಡಿದ ಬಿಜೆಪಿ ಗ್ರಹಣ’ ಸಂಗತ. ಮಾ.16) ಅವರ ಅಭಿಪ್ರಾಯಗಳಿಗೆ ಮತ್ತು ‘ಉರ್ದು ಅಕಾಡೆಮಿ ಬೇರ್ಪಡಿಸುವುದು ಬೇಡ’ (ಪ್ರವಾ. ವಾ.ವಾ. ಮಾ.18) ಎಂಬ ಪತ್ರದೊಳಗಿನ ಗೆಳೆಯರ ಧ್ವನಿಗೆ ನನ್ನ ಬೆಂಬಲವಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.