ADVERTISEMENT

ಎತ್ತಿನಹೊಳೆ ಎಂಬ ಪೆಡಂಭೂತ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 20:15 IST
Last Updated 13 ನವೆಂಬರ್ 2018, 20:15 IST

ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿಯ ಹಲವು ಗ್ರಾಮಗಳು ಈಗ ಆತಂಕ, ಭಯದಲ್ಲಿ ತಲ್ಲಣಿಸುತ್ತಿವೆ. ಕಾರಣ ಬದುಕನ್ನು ಬರಡಾಗಿಸುವ ಎತ್ತಿನಹೊಳೆ ಯೋಜನೆ. ಇದುವರೆಗಿನ ಬಹುತೇಕ ಯೋಜನೆಗಳು ಭೂಮಿ ನೀಡಿದ ರೈತರ ಬದುಕಿಗೆ ಬೆಂಕಿ ಇಟ್ಟವುಗಳೇ. ಶರಾವತಿ ಯೋಜನೆಯಲ್ಲಿ ಜಮೀನು ಕಳೆದುಕೊಂಡ ಅನೇಕ ರೈತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಇದೇ ದುಃಸ್ಥಿತಿ ಹಾಸನ ಜಿಲ್ಲೆ, ಅರಸೀಕೆರೆ ಭಾಗದ ರೈತರಿಗೂ ಕಾಡುತ್ತಿದೆ. ಒಂದು ಭಾಗದ ಜನರಿಗೆ ನೀರುಣಿಸಲು ಇನ್ನೊಂದು ಭಾಗದ ಜನರ ಜೀವನವನ್ನೇ ಆಪೋಷನ ತೆಗೆದುಕೊಳ್ಳುವ ಈ ಯೋಜನೆಯ ಫಲಾನುಭವಿಗಳು ಮಾತ್ರ ರಾಜಕಾರಣಿಗಳು ಮತ್ತು ಗುತ್ತಿಗೆದಾರರು. ಅಮಾಯಕ ರೈತರನ್ನು ಏಮಾರಿಸಿ ಅವರ ಜಮೀನಿನ ಪತ್ರ ಪಡೆದುಕೊಂಡು ಕೈಗೊಂದಿಷ್ಟು ಪುಡಿಗಾಸು ಕೊಟ್ಟು ಭರದಿಂದ ಕಾಮಗಾರಿ ನಡೆಸುತ್ತಿದ್ದಾರೆ. ಇದೀಗ ಈ ಕಾಲುವೆ ಎಂಬ ಪೆಡಂಭೂತ ಮುದುಡಿ ಎಂಬ ಹಳ್ಳಿಯವರೆಗೂ ಬಂದಿದೆ.

ಒಗ್ಗಟ್ಟಿಲ್ಲದ ರೈತರ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಂಡು ಅನ್ನದಾತರನ್ನು ಅಕ್ಷರಶಃ ಬೀದಿಗೆ ನೂಕುವ ಈ ಯೋಜನೆಯ ಭೂತ ನೃತ್ಯಕ್ಕೆ ತಡೆಯೊಡ್ಡುವವರೇ ಇಲ್ಲವಾಗಿದೆ. ಆರ್ಥಿಕ ದುಃಸ್ಥಿತಿಗೆ ಸಿಕ್ಕಿ ನರಳುವ ಸಣ್ಣಪುಟ್ಟ ರೈತರು ಈ ಪೆಡಂಭೂತಕ್ಕೆ ಬಲಿಯಾಗುತ್ತಿದ್ದಾರೆ. ಇಲ್ಲಿನ ರೈತನಾಯಕರು, ಜನಪ್ರತಿನಿಧಿಗಳು ರೈತರ ನೆರವಿಗೆ ಬರಬೇಕು. ಮಾಜಿ ಪ್ರಧಾನಿ, ಹಾಲಿ ಮುಖ್ಯಮಂತ್ರಿ ಇದೇ ಜಿಲ್ಲೆಯವರು.

-ಬಿ.ಎಸ್. ಮೋಹನ್‌ಕುಮಾರ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.