ADVERTISEMENT

ಎಲ್ಲಿ ಹುಡುಕೋಣ?

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:30 IST
Last Updated 31 ಮೇ 2018, 19:30 IST

‘ನಮಗೆಂತಹ ಸಾಹಿತಿಗಳು ಬೇಕು?’ (ಸಂಗತ, ಮೇ 31) ಲೇಖನ ಸಕಾಲಿಕ. ಆದರೆ ವಾಸುದೇವಮೂರ್ತಿ ಅವರು ಆಶಿಸಿರುವಂತಹ ಸಾಹಿತಿಗಳನ್ನು ಹುಡುಕಿ ತರುವುದೆಲ್ಲಿಂದ? ಇರುವ ಸಾಹಿತಿಗಳೆಲ್ಲ ಎಡ–ಬಲ ಎಂದೋ, ಹಿಂದು–ಮುಂದು ಅಂತಲೋ ಹಂಚಿಹೋಗಿ ಜಡಗೊಂಡಿದ್ದಾರೆ. ಅಧಿಕಾರ, ಅಂತಸ್ತು, ಮಾನ, ಸನ್ಮಾನದ ಬೆನ್ನುಬಿದ್ದು ತಮ್ಮತನವನ್ನೇ ಕಳೆದುಕೊಂಡಿದ್ದಾರೆ. ವಿಭಿನ್ನ ವಿಚಾರಧಾರೆಗಳಿಗೆ ತೆರೆದುಕೊಳ್ಳದೆ ಇವರೇ ಅಸಹಿಷ್ಣುತೆಯ ಹರಿಕಾರರೆನಿಸಿಕೊಳ್ಳುತ್ತಿದ್ದಾರೆ. ಎಲ್ಲದರಿಂದಲೂ ಸಮದೂರದಲ್ಲಿ ನಿಂತು, ಯಾವುದೇ ವಿಚಾರದ ಬಗ್ಗೆ ವಸ್ತುನಿಷ್ಠವಾಗಿ ಆಲೋಚಿಸುವ, ವಿಶ್ಲೇಷಿಸುವ, ಪ್ರತಿಭಟಿಸುವ ಛಾತಿಯನ್ನೇ ಕಳೆದುಕೊಂಡಿದ್ದಾರೆ. ಪೂರ್ವಗ್ರಹಗಳು ಸಾಹಿತಿಗಳಲ್ಲೂ ಮನೆ ಮಾಡಿವೆ. ಎಂಥ ಸಾಮಾಜಿಕ, ರಾಜಕೀಯ ಅನಿಷ್ಟಗಳ ಬಗ್ಗೆಯೂ ಇವರು ಚಕಾರ ಎತ್ತುವುದಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಇವರ ನಡೆ- ನುಡಿ, ಬದುಕು– ಬರಹಗಳ ಮಧ್ಯೆ ಇರುವ ಅಂತರ ಮತ್ತು ಒಬ್ಬ ಸಾಹಿತಿಗೆ ಇರಬೇಕಾದ ಸೂಕ್ಷ್ಮತೆ ಇವರಲ್ಲಿ ಇಲ್ಲದಿರುವುದು. ಬರಹಕ್ಕಿಂತ ಬದುಕು ದೊಡ್ಡದು ಎಂದು ಅನಿಸದಿದ್ದರೆ ಹೀಗೆಲ್ಲ ಆಗುವುದೇ.

ಸ್ವಾಭಿಮಾನ, ಉದಾತ್ತ ವಿಚಾರಗಳು, ಮಾನವೀಯ ಮೌಲ್ಯಗಳು ಒಬ್ಬ ಸಾಹಿತಿಯ ಬದುಕು ಮತ್ತು ಬರಹದ ಭಾಗವಾಗದಿದ್ದರೆ ಅಂಥ ಸಾಹಿತಿಯ ಬಗ್ಗೆ ಗೌರವಾದರ ಹುಟ್ಟದು. ಹಿಂದಿನ ತಲೆಮಾರಿನ ದಿಗ್ಗಜ ಸಾಹಿತಿಗಳ, ವ್ಯಕ್ತಿಗಳ ಬದುಕು ಎಲ್ಲರಿಗೂ ಆದರ್ಶವಾಗಬೇಕು.

ಸಾಹಿತಿಗಳನ್ನು ಅವರ ಭ್ರಮಾಲೋಕದಿಂದ ಹೊರತರುವ ಮತ್ತು ಅವರ ಆತ್ಮಸಾಕ್ಷಿಯನ್ನು ಉದ್ದೀಪಿಸುವ ಕೆಲಸ ಮೊದಲು ಆಗಬೇಕು.

ADVERTISEMENT

– ವೆಂಕಟೇಶ ಮಾಚಕನೂರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.