ADVERTISEMENT

ಕನಕನ ಕಿಂಡಿ ಎನ್ನಲು ಅಡ್ಡಿಯೇನು?

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 19:30 IST
Last Updated 4 ಸೆಪ್ಟೆಂಬರ್ 2011, 19:30 IST

ಶ್ರೀ ಪೇಜಾವರ ತೀರ್ಥರನ್ನೂ ಒಳಗೊಂಡಂತೆ, ಉಡುಪಿ ಅಷ್ಟಮಠಾಧೀಶರ ಆಲೋಚನಾ ವೈಖರಿ ಯಾವ ಶತಮಾನದ್ದೆಂದು ಪ್ರಜ್ಞಾವಂತರು ಪ್ರಶ್ನಿಸುವಂತಿದೆ. ಈ ಮಠಗಳ ಕಾರ‌್ಯ ಪ್ರದರ್ಶನ ಶ್ರೀಕೃಷ್ಣ ದೇಗುಲದ ಕಿಂಡಿಯನ್ನು `ಕನಕನ ಕಿಂಡಿ~ ಎಂದೇ ಕರೆದರೆ ಸಂತ ಕನಕದಾಸರ ಅಂಕಿತ ಬ್ರಾಹ್ಮಣರ ದೇಗುಲದ ಮೇಲೆ ಬೀಳುವುದೆಂಬ ಭಯವೆ, ಇಲ್ಲ ಜಾತ್ಯಂಧತೆಯೇ ತಿಳಿಯದು. ನಾವೆಲ್ಲ ನಮ್ಮ ಎಳೆತನದಲ್ಲಿ ಹಿರಿಯರ ಬಾಯಲ್ಲಿ ಕೇಳಿದ್ದು `ಕನಕನ~ ಕಿಂಡಿಯೊಂದೆ.
ಈಗ ಪೇಜಾವರ ಶ್ರೀಗಳ ಕೃಪಾವಿಶೇಷದಿಂದ ನವಗ್ರಹಗಳು ಬೇರೆ ಕಿಂಡಿಯೊಳಗೆ ತೂರಿಬಂದಿವೆ. ಈ ಕನಕ ನವಗ್ರಹ ಜೋಡಿ ಫೆವಿಕಾಲ್‌ನಂತೆ ಅಂಟಿಕೊಳ್ಳುವ ಮೊದಲೆ ನವಗ್ರಹ ಕಿಂಡಿಯ ಔಚಿತ್ಯ, ವೈಶಿಷ್ಟ್ಯವನ್ನು ತಿಳಿಯಬೇಕಾಗಿದೆ. ಈ ಕಿಂಡಿಯ ಮೂಲಕ ಗ್ರಹ ವೀಕ್ಷಣೆ (ಯಾ ದರ್ಶನ) ಮಾಡಿದರೇನೇ ಗ್ರಹಪೀಡಾ ಪರಿಹಾರವೇ ಹೇಗೆ? ಇವುಗಳನ್ನು ಪ್ರತ್ಯೇಕವಾಗಿ ದರ್ಶಿಸಿ, ಕನಕನ ಕಿಂಡಿಯೊಂದನ್ನೆ ಪ್ರತ್ಯೇಕವಾಗಿ ದರ್ಶಿಸುವ ವ್ಯವಸ್ಥೆ ಇಲ್ಲವೆ?

ಶ್ರೀ ವೃಷ್ಣವ ದೇವಾಲಯಗಳಲ್ಲಿ ಹತ್ತೂ ಆಳ್ವಾರರುಗಳ ವಿಗ್ರಹಗಳೂ ಇರುವುದು ಬ್ರಾಹ್ಮಣೇತರ ತತ್ರಾಪಿ ದಲಿತ ಶ್ರೀ ವೈಷ್ಣವ ಭಕ್ತರ ನೆನಪಿನಲ್ಲೆ (ಪೆರಿಯಾಳ್ವಾರ ಆಂಡಾಳ್ ಹೊರತುಪಡಿಸಿ) ಈ ವಿಗ್ರಹಗಳಿಗೆ ಇಂದಿಗೂ ಪೂಜಾಕೈಂಕರ‌್ಯ ನಿರುಪಾಧಿಕವಾಗಿ ನಡೆದಿದೆ.

ಮೇಲುಕೋಟೆಯಲ್ಲಿ ಭಗವದ್ರಾಮಾನುಜರು ಪ್ರತಿಷ್ಠಾಪಿಸಿದ ಬೀಬಾನಾಚ್ಚಿಯಾರ್ ಸನ್ನಿಧಿ ಮುಸ್ಲಿಂ ರಾಜಕುವರಿಯ ನೆನಪಿಗಾಗಿ, ಆಕೆ ವಿಷ್ಣುಭಕ್ತೆ ಎಂಬ ಕಾರಣಕ್ಕಾಗಿ ಐತಿಹಾಸಿಕ, ಚಾರಿತ್ರಿಕ ಸತ್ಯಾಂಶಗಳು ನಮ್ಮೆದುರು ಇದ್ದೂ ಅವನ್ನು ಧಿಕ್ಕರಿಸಿ ಸಂತ ಕನಕದಾಸರನ್ನು ಎಲ್ಲೋ ಒಂದು ಕಡೆ ಈ ಮಠಗಳು ಉಪೇಕ್ಷಾಭಾವದಿಂದ ಕಾಣುತ್ತಿವೆ ಎಂದು ನನ್ನ ಗುಮಾನಿ. ಈ ವ್ಯವಸ್ಥೆಯಲ್ಲಿ ಪುರೋಗಾಮಿ ಚಿಂತನೆಗೆ ಆಸ್ಪದವೇ ಇಲ್ಲವೆ?
.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.