ADVERTISEMENT

ಕನಸಿನ ಸರ್ಕಾರ ಇದೇನಾ ?

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 14:30 IST
Last Updated 23 ಫೆಬ್ರುವರಿ 2011, 14:30 IST

ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ   ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಬಗ್ಗೆ ಸಹಜವಾಗಿಯೆ ಜನರಲ್ಲಿ ಅಪಾರ ನಿರೀಕ್ಷೆಯಿತ್ತು. ವಿರೋಧ ಪಕ್ಷದ ನಾಯಕನಾಗಿ ನಂತರ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ ಯಡಿಯೂರಪ್ಪನವರ ಸರ್ಕಾರಕ್ಕೆ ಕಳೆದವಾರ ತಾನೆ ಸಾವಿರ ದಿನ ತುಂಬಿದೆ. ಅದಕ್ಕಾಗಿ ಬೃಹತ್ ಸಮಾರಂಭ ಮಾಡಿ ಹರ್ಷಪಟ್ಟಿದ್ದು ಆಯಿತು.

ಆದರೆ ಈ ಸರ್ಕಾರ ಸಾವಿರ ದಿನಗಳನ್ನು ಜನಮೆಚ್ಚುವ ಹಾಗೆ ಯಶಸ್ವಿಯಾಗಿದೆ ಎಂದು ಹೇಳುವುದು ಸಾಧ್ಯವಿಲ್ಲ. ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಸಾವಿರ ನಿರೀಕ್ಷೆಗಳಿದ್ದವು. ರೈತರ ನೋವನ್ನು ಆಲಿಸುವ ಸರ್ಕಾರವಾಗುತ್ತದೆ ಎಂಬ ಭಾವನೆಯಿತ್ತು. ಆದರೆ ಆಗಿದ್ದೇನು? ಅಧಿಕಾರಕ್ಕೆ ಬಂದು ಒಂದು ತಿಂಗಳಲ್ಲೇ ಹಾವೇರಿಯಲ್ಲಿ ಗೋಲಿಬಾರ್(ರೈತನ ಸಾವು), ಪಕ್ಷದೊಳಗಿನ ಗುಂಪುಗಾರಿಕೆ, ಅಧಿಕಾರ ಉಳ್ಳಿಸಿಕೊಳ್ಳಲು, ರೆಸಾರ್ಟ್ ರಾಜಕಾರಣ, ಭಿನ್ನಮತಿಯರ ಬ್ಲ್ಯಾಕ್ಲ್‌ಮೇಲ್ ಆಟ, ಒಟ್ಟಿನಲ್ಲಿ ನಮ್ಮ ಸರ್ಕಾರವೇ ಒಂದು ರೀಯಾಲಿಟಿ ಶೋ ಆಯೋಜಿಸಿದಂತಿತ್ತು. ಮತದಾರರು ಮಾತ್ರ ಮೂಕ ಪ್ರೇಕ್ಷಕರಂತೆ ನೋಡಬೇಕಾಗಿ ಬಂದುದು ವಿಷಾದನೀಯ.

ಇದಾಗಿಯೂ ಸರ್ಕಾರವು ಕೆಲವು ಅಭಿವೃದ್ದಿ ಯೋಜನೆಯನ್ನು ತಂದಿರುವುದನ್ನು ಕಡೆಗಣಿಸಲಾಗದು. ಭಾಗ್ಯಲಕ್ಷ್ಮಿ, ಸೈಕಲ್ ವಿತರಣೆ ಯೋಜನೆಗಳನ್ನು ಮರೆಯಲಾಗದು. ಆದರೆ ಇಂತಹ ಯೋಜನೆಗಳಿದ್ದರೂ ಸರ್ಕಾರ ಜನರ ಪ್ರೀತಿ  ಗಳಿಸುವಲ್ಲಿ ಸಂಪೂರ್ಣ ಎಡವಿದೆ. ಮುಖ್ಯಮಂತ್ರಿಯ ಜಾತಿಗೆ ವಿಶೇಷ ಆದ್ಯತೆ, ಜೊತೆಗೆ ಭೂ ಹಗರಣ, ಸ್ವಜನಪಕ್ಷಪಾತ, ಭ್ರಷ್ಟಾಚಾರದ ಹಗರಣಗಳು. ಇದನ್ನೆಲ್ಲ ಪ್ರಶ್ನಿಸಿದವರಿಗೆ ಮರ್ಯಾದೆ ಬಿಟ್ಟವರಂತೆ ಹಿಂದಿನವರು ಮಾಡಿಲ್ಲವೇ? ಎನ್ನುವ ಭಂಡತನದ ಉತ್ತರ!

ಇವೆಲ್ಲವೂ ಸರ್ಕಾರಕ್ಕೆ ಅಂಟಿಕೊಂಡ ಆರೋಪಗಳು. ಆಪರೇಷನ್ ಕಮಲ ಎಂಬ ಹೊಸ ಅನೈತಿಕ ರಾಜಕಾರಣವನ್ನು ಹುಟ್ಟಿ ಹಾಕಿದ ಕೀರ್ತಿ ಈ ಸರ್ಕಾರದ್ದು. ಬರೀ ಸಮಾವೇಶದಲ್ಲೇ ಕಾಲ ಕಳೆಯುತ್ತಿರುವ ಈ ಸರ್ಕಾರವನ್ನು ವಿರೋಧಿಸುವ ವಿರೋಧ ಪಕ್ಷದವರು ಪ್ರತಿ ಸಮಾವೇಶದಲ್ಲಿ ತೊಡಗಿರುವುದು ವಿಚಿತ್ರ. ಈ ಹಿಂದೆ ದೇಶದಲ್ಲಿ ಕೆಟ್ಟ ಆಡಳಿತ ರಾಜ್ಯ ಎಂದು ಬಿಹಾರವನ್ನು ಕರೆಯಲಾಗುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ಗಮನಿಸಿದರೆ ನಮ್ಮ ರಾಜ್ಯವೆಂದರೆ ತಪ್ಪಿಲ್ಲ. ಏಕೆಂದರೆ  ‘ದೇಶದಲ್ಲೇ ನಂ 1 ಭ್ರಷ್ಟರಾಜ್ಯ’ ಎಂದು ಹಣೆಪಟ್ಟಿ ಈಗಾಗಲೇ ನಮಗೆ ಬಂದುಬಿಟ್ಟಿದೆಯಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.