ADVERTISEMENT

ಕನ್ನಡ ಅಭಿಮಾನದ ದನಿ ಮತ್ತೆ ಮೊಳಗಲಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 16:45 IST
Last Updated 24 ಫೆಬ್ರುವರಿ 2011, 16:45 IST

ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಚಿತ್ರನಟಿ ಹೇಮಾಮಾಲಿನಿ ‘ನನಗೆ ಕರ್ನಾಟಕದ ಸಮಸ್ಯೆಗಳ ಬಗ್ಗೆ ಏನೇನೂ ಗೊತ್ತಿಲ್ಲ. ಆದರೆ ಎಲ್ಲವನ್ನೂ ಅರಿತುಕೊಂಡು ಅವುಗಳ ಪರಿಹಾರಕ್ಕಾಗಿ ಹೋರಾಡುವೆ’ ಎಂದಿದ್ದನ್ನು ಓದಿ ಆಶ್ಚರ್ಯವೂ, ಖೇದವೂ ಉಂಟಾಯಿತು.

ನಾವು ಚುನಾಯಿಸಿ ಕಳಿಸಿದ ಮೇಲೆ ನಮ್ಮ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವೆ ಎಂದಿರುವ ಅವರ ಈ ಮಾತು-ನೌಕರಿಯೊಂದರ ಸಂದರ್ಶನಕ್ಕೆ ಬಂದಿರುವ ಅಭ್ಯರ್ಥಿಯೊಬ್ಬ ‘ನನಗೆ ಈ ವೃತ್ತಿಯಲ್ಲಿ ಯಾವುದೇ ಆಸಕ್ತಿಯಾಗಲೀ ತರಬೇತಿಯಾಗಲೀ ಇಲ್ಲ. ನೀವು ನನ್ನನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ಎಲ್ಲವನ್ನೂ ಕಲಿತುಕೊಂಡು ನಿರ್ವಹಿಸುತ್ತೇನೆ’ ಎಂಬಂತಿದೆ. ಇಂಥವರಿಂದ ಆ ಹುದ್ದೆಗೆ ಘನತೆ-ನ್ಯಾಯ ದೊರಕಿದಂತೆಯೇ ಸರಿ.

ಹೊರಗಿನವರನ್ನೇ ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸುವುದು ಕನ್ನಡಿಗರ ದೌರ್ಭಾಗ್ಯ! ಕನ್ನಡಿಗರ ಆತ್ಮಾಭಿಮಾನವನ್ನು ಕೆಣಕುವ, ಸಹನೆಯನ್ನು ಪರೀಕ್ಷಿಸುವ ಇಂಥ ವಿದ್ಯಮಾನಗಳಿಗೆ ಕೊನೆಯೇ ಇಲ್ಲವೆ? ಎಲ್ಲ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು ಮೌನ ಮುರಿದು ಮಾತನಾಡಬೇಕಾದ ಅಗತ್ಯವಿದೆ ಈಗ. ಹೇಮಾಮಾಲಿನಿ ವಿರುದ್ಧ ಕಣಕ್ಕಿಳಿದಿರುವ ಡಾ.ಕೆ.ಮರುಳಸಿದ್ದಪ್ಪನವರು ಇದೇ ಕಾರಣಕ್ಕೆ ಅಭಿನಂದನಾರ್ಹರಾಗಿದ್ದಾರೆ.

ಹಲವು ಸೈದ್ಧಾಂತಿಕ ಭಿನ್ನಾಭಿಪ್ರಯಾಗಳಿದ್ದಾಗ್ಯೂ ಚಿ.ಮೂ. ಅವರ ಗೌರವ ಡಾಕ್ಟರೇಟ್ ವಿಷಯದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಿ ಒಕ್ಕೊರಲಿನಿಂದ ಪ್ರತಿಭಟಿಸಿದ ಕನ್ನಡದ ಸಾಹಿತ್ಯ ವಲಯ ಈ ವಿಚಾರದಲ್ಲೂ ತನ್ನ ನಿಲುವನ್ನು ಸ್ಪಷ್ಟಪಡಿಸಿ ಕನ್ನಡಕ್ಕಾಗಿ ಕೊರಳೆತ್ತಬೇಕಾಗಿದೆ. ಇಲ್ಲದಿದ್ದರೆ ಸಂಸತ್ತಿನಲ್ಲಿ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸರ್ಕಾರ ಮತ್ತು ರಾಷ್ಟ್ರದ ಗಮನ ಸೆಳೆಯುವಂತೆ ಮಾತನಾಡಬಲ್ಲ ಕೊರಳೊಂದನ್ನು ನಾವೇ ಹಿಚುಕಿದ ಅಪರಾಧಿಭಾವದಿಂದ ನರಳಬೇಕಾಗುತ್ತದೆ.


-ಡಾ.ಶಂಕರಗೌಡ ಬೆಟ್ಟದೂರು, ಜಂಬಣ್ಣ ಅಮರಚಿಂತ, ಚಿದಾನಂದ ಸಾಲಿ, ಶಿವರಾಜ ಬೆಟ್ಟದೂರು, ಆರೀಫ್ ರಾಜಾ
ರಾಯಚೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT