ADVERTISEMENT

ಕಾರಂತರಿಂದ ಕಲಿಯೋಣ

ರವಿ ಹೆಗಡೆ
Published 10 ಜೂನ್ 2014, 19:30 IST
Last Updated 10 ಜೂನ್ 2014, 19:30 IST

ದೇವಾಲಯ ನಿರಾಕರಣೆಯಿಂದ ಮೌಢ್ಯ ನಾಶವಾಗುವುದು ಎಂದು ಹಿರಿಯ ಸಂಶೋಧಕ ಪ್ರೊ.ಎಂ.ಎಂ. ಕಲಬುರ್ಗಿ ಅವರು ಅಭಿಮತ ವ್ಯಕ್ತಪಡಿಸಿ­ರುವ ವರದಿಗೆ (ಪ್ರ. ವಾ. ಜೂ.10) ಸಂಬಂಧಿಸಿ ಈ ಪತ್ರ. ಪೌರೋಹಿತ್ಯದಿಂದ ಮೌಢ್ಯಾಚರಣೆಗೆ ಒತ್ತು ದೊರೆಯುವುದೆಂದೂ, ದೇವರು, ದೇವಸ್ಥಾನಗಳನ್ನು ನಿರಾಕರಿಸುವುದರಿಂದ ಬದುಕು ಹಸನಾದೀತು ಎಂಬ ವಿಚಿತ್ರ ವಾದವಿದು.

ಅಖಂಡ ಭಾರತದ ಸಮಗ್ರ ಸಂಸ್ಕೃತಿ, ವಿವಿಧತೆ, ಸಾಮಾಜಿಕ ಸ್ಥಿತಿಗತಿ, ಮನೋಧರ್ಮ ಮತ್ತು ಸಹಿಷ್ಣುತೆ ಇವೆಲ್ಲವುಗಳಲ್ಲೂ ಧರ್ಮದ ಗಾಢ ಪರಿಣಾಮ ಕಾಣುತ್ತೇವೆ. ದೇವರ ಕುರಿತಾದ ನಂಬಿಕೆ ಮತ್ತು ಅವುಗಳ ಫಲವಾಗಿ ಸ್ಥಾಪಿತವಾದ ಪುರಾತನ ದೇವಾಲಯಗಳು, ಅವುಗಳ ವಾಸ್ತುಶಿಲ್ಪ, ನಮ್ಮ ಸಮಗ್ರ ಸಂಸ್ಕೃತಿಯನ್ನು ಬೆಳೆಸುವಲ್ಲಿ, ಬಿಂಬಿಸುವಲ್ಲಿ ನೀಡಿರುವ ಕೊಡುಗೆ ಅಪಾರ.

ಮೌಢ್ಯ ನಿವಾರಣೆಗೆ ಕಳೆದ ಶತಮಾನದಲ್ಲಿ ಸಾಕಷ್ಟು ಶ್ರಮಿಸಿದ್ದ ಶಿವರಾಮ ಕಾರಂತರಿಂದ ನಾವು ಕಲಿಯಬೇಕಾದದ್ದು ಇದೆ. ಬೇರೆಯವರ ಭಾವನೆಗೆ ಧಕ್ಕೆ ಬರದಂತೆ ವ್ಯವಹರಿಸಿ, ಜೀವನದ ಉದ್ದಕ್ಕೂ ಮೌಢ್ಯವನ್ನು ವಿರೋಧಿಸಿದ ಕಾರಂತರು ನಮಗೆ ಎಂದೆಂದಿಗೂ ಆದರ್ಶಪ್ರಾಯರಾಗಬೇಕು.

ಅಂಥ ಒಂದು ಉದಾಹರಣೆ: ತೀರಾ ಹಿಂದೊಮ್ಮೆ ಕಾರಂತರು ಉತ್ತರಕನ್ನಡದ ಯಾಣಕ್ಕೆ ಭೇಟಿ ಕೊಟ್ಟಾಗ ನಡೆದ ಘಟನೆ. ಶುದ್ಧ ನಾಸ್ತಿಕರಾಗಿದ್ದ ಕಾರಂತರು ಯಾಣದ ಬೆಟ್ಟ ಏರುವ ಮೊದಲು ಸ್ಥಳೀಯ ಧಾರ್ಮಿಕ ಸಂಪ್ರದಾಯದಂತೆ,  ಮೈಲಿಗೆ­ಯಾಗ­ಬಾರದೆಂದು ಮಾರ್ಗಮಧ್ಯೆ ಸಿಗುವ ಚಂಡಿಕಾ ನದಿಯಲ್ಲಿ ಮುಳುಗೆದ್ದಿದ್ದರು!

ಕಾರಂತರಿಗೆ ಮಡಿ, ಮೈಲಿಗೆ, ಇತ್ಯಾದಿ ಇರಲಿಲ್ಲ, ಆದರೆ ಸಮಾಜದ ಇತರರ ಭಾವನೆಗಳನ್ನು ಎಂದೆಂದಿಗೂ ಗಾಸಿಗೊಳಿ­ಸದೆ ಜೀವನದುದ್ದಕ್ಕೂ ಮೌಢ್ಯವನ್ನು ವಿರೋಧಿಸುವ, ಸಮಾಜವನ್ನು ತಿದ್ದುವ ಪರಿಪೂರ್ಣ ಮನಸ್ಥಿತಿ ಅವರಲ್ಲಿತ್ತು. ಇಂಥ ಸೂಕ್ಷ್ಮಗಳನ್ನು ಕಾರಂತರಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ.

– ರವಿ ಹೆಗಡೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.