ಕೋಣನಕುಂಟೆಯಲ್ಲಿ ಕಳ್ಳರ ಕಾಟ ಕನಕಪುರ ರಸ್ತೆ ಪಕ್ಕದ ಅಂಜನಾಪುರ ಮುಖ್ಯ ರಸ್ತೆಯಲ್ಲಿರುವ ಕೋಣನಕುಂಟೆ, ಸೌದಾಮಿನಿ ಲೇಔಟ್‌ನಲ್ಲಿ ಇತ್ತೀಚೆಗೆ ಕಳ್ಳರ ಕಾಟ ಅಧಿಕವಾಗಿದೆ. ಮನೆಯ ಹೊರಗಡೆ ಇರುವ ಚಪ್ಪಲಿ, ಶೂಗಳೂ ಕಳುವಾಗುತ್ತಿವೆ. ಕೆಲವು ಮನೆಗಳಲ್ಲಿ ವಾಟರ್ ಮೀಟರ್‌ಗಳು ಕಳ್ಳತನವಾಗಿವೆ. 
  
 ಕೋಣನಕುಂಟೆ ಪೊಲೀಸ್ ಠಾಣೆ ಸಮೀಪದಲ್ಲಿಯೇ ಇದ್ದರೂ ಕಳ್ಳರಿಗೆ ಪೋಲಿಸರ ಭಯವೇ ಇಲ್ಲದಂತಾಗಿದೆ. ಹೊಯ್ಸಳ ವಾಹನ ಇದ್ದೂ ಪ್ರಯೋಜನವಿಲ್ಲ. ಇಂತಹ ಹೊಯ್ಸಳ ಮತ್ತು ಸಿಬ್ಬಂದಿ ನಮಗೆ ಬೇಕೆ? ಇನ್ನು ಹೊಸದಾಗಿ ಪ್ರಾರಂಭಗೊಂಡಿರುವ ಕೋಣನಕುಂಟೆ ಪೊಲೀಸ್ ಸ್ಟೇಷನ್‌ನಿಂದ ಸಾರ್ವಜನಿಕರಿಗೆ ಉಪಯೋಗವಿಲ್ಲದಂತಾಗಿದೆ.
 –ಸುನಂದಾ, ಕೋಣನಕುಂಟೆ
  
 ಫುಟ್‌ಪಾತ್ ತೆರವುಗೊಳಿಸಿ
 ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ವಿಜ್ಞಾನ ನಗರದಲ್ಲಿರುವ ಬಾಟಾ ಶೋರೂಂನ ಪಕ್ಕದಲ್ಲಿರುವ ಬಿರಿಯಾನಿ ಅಂಗಡಿಯವರು ಅಂಗಡಿಯ 
 ಮುಂದಿದ್ದ ಫುಟ್‌ಪಾತ್‌ನಲ್ಲಿಯೇ ಗ್ಯಾಸ್ ಸಿಲಿಂಡರ್ ಹಾಗೂ ದೊಡ್ಡ ಬಿರಿಯಾನಿ ಪಾತ್ರೆ ಇಟ್ಟು ಅಡುಗೆ ಮಾಡುತ್ತಾರೆ.
 
 ಹೀಗಾಗಿ ಇಲ್ಲಿ ಫುಟ್‌ಪಾತ್‌ನಲ್ಲಿ ಸಾರ್ವಜನಿಕರು ನಡೆದಾಡುವುದು ದುಸ್ತರವಾಗಿದೆ. ಬಿಡುವಿಲ್ಲದ ವಾಹನಗಳ ಓಡಾಟದಿಂದಾಗಿ ಈ ರಸ್ತೆಯಲ್ಲಿ ಹೋಗಲು ಅಸಾಧ್ಯ. ಈಗ ಸ್ವಲ್ಪ ದಿನಗಳ ಹಿಂದೆ ಬಿರಿಯಾನಿ ಅಂಗಡಿ ಹಾಗೂ ಬಾಟಾ ಶೋರೂಂ ಅಂಗಡಿಯ ಮಧ್ಯೆ ದಾರಿಯಲ್ಲಿ ಒಂದು ತಡೆಗೋಡೆಯನ್ನು ನಿರ್ಮಿಸಿ ಕಾಲುದಾರಿಯನ್ನೇ ಮುಚ್ಚಿದ್ದರು.
  
 ಬಿಬಿಎಂಪಿಯವರು ಇದನ್ನು ನೋಡಿಯೂ ನೋಡದಂತಿದ್ದು, ತಮಗೆ ಸಂಬಂಧಿಸಿದ ವಿಷಯವಲ್ಲ ಎಂದು ಪರಿಗಣಿಸಿದಂತೆ ತೋರುತ್ತಿದೆ.
 ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಕಡೆಗೆ ಗಮನ ಹರಿಸಿ ಕಾಲುದಾರಿಯನ್ನು ತೆರವು ಮಾಡಿಸಿ ಜನರಿಗೆ ತಿರುಗಾಡಲು ಅನುಕೂಲ
  ಮಾಡಿಕೊಡಬೇಕು.
 –ಕವಿತಾ ರೆಡ್ಡಿ, ರಾಜಣ್ಣ ಕಾಲೋನಿ, ವಿಜ್ಞಾನ ನಗರ
  
 ರಸ್ತೆ ಸ್ವಚ್ಛತೆ ಬೆಳಿಗ್ಗೆ ಬೇಗ ಮುಗಿಸಲಿ
 ನಮ್ಮ ಮಹಾನಗರದಲ್ಲಿ ಪೌರ ಕಾರ್ಮಿಕರು ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಪ್ರಮುಖ ರಸ್ತೆಯಲ್ಲೂ ರಸ್ತೆ ಸ್ವಚ್ಛತಾ ಕಾರ್ಯ ಮಾಡುತ್ತಿರುತ್ತಾರೆ. 
 ಪೌರ ಕಾರ್ಮಿಕರಿಗೆ ಹಿಂದೆ ಬೆಳಿಗ್ಗೆ ಆರು ಗಂಟೆಗೇ ಹಾಜರಿ ತೆಗೆದುಕೊಂಡು ಕಾರ್ಯ ನಿರ್ವಹಿಸಲು ಸೂಚಿಸಲಾಗುತ್ತಿತ್ತು.
 
 ಅದರಂತೆ ಬೆಳಿಗ್ಗೆಯೇ ರಸ್ತೆ ಸ್ವಚ್ಛತಾ ಕಾರ್ಯ ಮಾಡಿ ಮುಗಿಸುತ್ತಿದ್ದರು. ಆದರೆ ಈಗ ಸಂಬಂಧಿಸಿದವರು ಇದನ್ನು ಅವರ ಗಮನಕ್ಕೆ ತಂದರೂ ಅವರು ಇದರ ಬಗ್ಗೆ ಗಮನಹರಿಸಿಲ್ಲ.  ರಸ್ತೆ ಸ್ವಚ್ಛತಾ ಕಾರ್ಯವನ್ನು ಬೆಳಿಗ್ಗೆ ಬೇಗ ಮಾಡಿ ಮುಗಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. 
 –ಎ.ಕೆ.ಅನಂತಮೂರ್ತಿ, ನಾಗೇಂದ್ರ ಬ್ಲಾಕ್
  
 ಬಸ್ ಸಂಪರ್ಕ ಕಲ್ಪಿಸಿ
 ಬಿಎಂಟಿಸಿ ಬಸ್ಸುಗಳು ಜೆ.ಪಿ.ನಗರದ ಜಂಬೂ ಸವಾರಿ ದಿಣ್ಣೆಯಿಂದ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಶಿವಾಜಿನಗರ ಕಡೆಗೆ ಪುಟ್ಟೇನಹಳ್ಳಿ ಮಾರ್ಗವಾಗಿ ಸಂಚರಿಸುತ್ತವೆ. 
  
 ಆದರೆ ಜಂಬೂ ಸವಾರಿ ದಿಣ್ಣೆ, ಸುರಭಿನಗರ, ನಾಯಕ್ ಲೇಔಟ್, ಶ್ರೀಮಾತಾ ಲೇಔಟ್,  ವೆಂಕಟೇಶ್ವರ ಲೇಔಟ್‌ನ ನಿವಾಸಿಗಳಿಗೆ ಬನ್ನೇರುಘಟ್ಟ ರಸ್ತೆಗೆ ತೆರಳಬೇಕಾದಲ್ಲಿ ಈ ಮಾರ್ಗವಾಗಿ ಬಸ್‌ನ ವ್ಯವಸ್ಥೆ ಇಲ್ಲ. 
  
 ಜಂಬೂಸವಾರಿ ದಿಣ್ಣೆ ಬಸ್ ನಿಲ್ದಾಣದಿಂದ  ಹೊರಡುವ ಕೆಲ ಬಸ್‌ಗಳನ್ನಾದರೂ ಬಿ.ಕೆ.ಸರ್ಕಲ್, ವೆಂಕಟೇಶ್ವರ ಲೇಔಟ್, ಲೊಯೆಲಾ ಶಾಲಾ ಮಾರ್ಗವಾಗಿ ಬನ್ನೇರುಘಟ್ಟ ರಸ್ತೆಗೆ ಸಂಪರ್ಕಿಸುವಂತೆ ಮಾರ್ಗ ಬದಲಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸೂಕ್ತ ವ್ಯವಸ್ಥೆ ಮಾಡಿ. 
 –ವಿ.ಹೇಮಂತಕುಮಾರ, ಜೆ.ಪಿ ನಗರ 8ನೇ ಹಂತ
  
 ಅಗೆದ ಗುಂಡಿಗಳನ್ನು ಮುಚ್ಚಿಸಿ
 ಬೆಳ್ಳಂದೂರು ಪೆಟ್ರೋಲ್ ಬಂಕ್ ಸಮೀಪದ ಗ್ರೀನ್‌ವೆಲ್ ಲೇಔಟ್ ಮಾರ್ಗೊಸ ಅವೆನ್ಯೂ ಅಪಾರ್ಟ್‌ಮೆಂಟ್ ಬಳಿ ರಸ್ತೆಯನ್ನು ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದ ಪಾದಚಾರಿಗಳಿಗೆ ತುಂಬ ತೊಂದರೆಯಾಗುತ್ತಿದೆ. ಈ ಗುಂಡಿಗಳನ್ನು ಯಾಕೆ ಮುಚ್ಚುತ್ತಿಲ್ಲ? ಸಂಬಂಧಪಟ್ಟವರು ಕೂಡಲೇ ಗಮನಹರಿಸಿ ಕ್ರಮ ಕೈಗೊಳ್ಳಬೇಕು. 
 –ಬೆಳ್ಳಾವೆ ರಮೇಶ್, ಬೆಳ್ಳಂದೂರು
  
 ನಂ. 258 ಬಿಎನ್ ಬಸ್ಸುಗಳು ಬೇಕು
 ಬೆಂಗಳೂರಿನ ಪ್ರಮುಖ ಬಡಾವಣೆಯಲ್ಲಿ ಒಂದಾದ ‘ಕುವೆಂಪು ನಗರದಿಂದ ನೆಲಮಂಗಲಕ್ಕೆ ಹೋಗುವ ಬಿಎಂಟಿಸಿಯ ಮಾರ್ಗ ಸಂಖ್ಯೆ 258 
 ಬಿಎನ್ ಬಸ್ಸುಗಳಿಂದ ಈ ಮಾರ್ಗದಲ್ಲಿ ಬರುವ ಲಾಲ್‌ಬಾಗ್, ಕುವೆಂಪುನಗರ, ಕಾರ್ಪೊರೇಶನ್, ಯಶವಂತಪುರ, ದಾಸರಹಳ್ಳಿ, ಮಾಕಳಿ, ನೆಲಮಂಗಲದ ಪ್ರಯಾಣಿಕರಿಗೆ ಬಹಳ ಅನುಕೂಲವಾಗುತ್ತಿತ್ತು. ಈ ಮಾರ್ಗದ ಬಸ್ಸುಗಳು ಬಿಎಂಟಿಸಿಗೆ ಲಾಭದಾಯಕವೂ ಹೌದು. 
  
 ಆದರೆ ಈಗ ಕೆಲವು ದಿನಗಳಿಂದ ಮಾರ್ಗ ಸಂಖ್ಯೆ 258 ಬಿಎನ್ ಬಸ್ಸುಗಳು ಅಪರೂಪ ಎಂಬಂತಾಗಿದೆ. ಇದರಿಂದ ಈ ಮಾರ್ಗದ ಪ್ರಯಾಣಿಕರಿಗೆ ಬಹಳ ತೊಂದರೆಯಾಗಿದೆ. ಆದ್ದರಿಂದ ಬಿಎಂಟಿಸಿಯ ಸಂಬಂಧಿಸಿದ ಅಧಿಕಾರಿಗಳು, ಈ ಮೊದಲಿನಂತೆಯೇ ಕುವೆಂಪು ನಗರದಿಂದ ಬೆಳಿಗ್ಗೆ 7–50, 8–30, 9–50, 10–50, 11–50ಕ್ಕೆ ಮಾರ್ಗ ಸಂಖ್ಯೆ 258 ಬಿಎನ್ ಬಸ್ಸುಗಳ ಸಂಚಾರಕ್ಕೆ ಅನುವು 
 ಮಾಡಿಕೊಡಬೇಕು.
 –ಆರ್.ಎನ್.ಎಸ್. ರಾವ್, ಎಂ.ಎಸ್.ರಸ್ತೆ,    
  
 ರಸ್ತೆಯನ್ನು  ಶೀಘ್ರ ದುರಸ್ತಿಗೊಳಿಸಿ
 ಐಟಿಪಿಎಲ್ ಮುಖ್ಯರಸ್ತೆಯ ವಾರ್ಡ್ ನಂ 85ರ ಅಣ್ಣಯ್ಯ ಲೇಔಟ್ ರಸ್ತೆಯು ಒಂದು ವರ್ಷದಿಂದ ದುರಸ್ತಿ ಕಾಣದೆ ಸಂಚಾರಕ್ಕೆ ತೊಡಕು ಉಂಟು ಮಾಡಿದೆ. ರಸ್ತೆಯ ಈ ಸ್ಥಿತಿಯಿಂದಾಗಿ ವಾಹನ ಸಂಚಾರಕ್ಕೆ  ಹಾಗೂ ಸ್ಥಳೀಯರಿಗೆ ನಡೆದಾಡಲು ತೊಂದರೆಯಾಗಿದೆ.
ಇನ್ನು ಮಳೆ ಬಂದರೆ ರಸ್ತೆಯಲ್ಲಿರುವ ಗುಂಡಿಗಳಲ್ಲಿ  ಕೆಸರು ನಿಲ್ಲುತ್ತದೆ. ಹೀಗಾಗಿ ಮಳೆಗಾಲ ಆರಂಭವಾಗುವುದರೊಳಗೆ ಈ ರಸ್ತೆಯನ್ನು ಸರಿಪಡಿಸಬೇಕಾಗಿದೆ.
 ನಾಗರಾಜ ರೆಡ್ಡಿ, ಅಣ್ಣಯ್ಯ ಲೇಔಟ್