ADVERTISEMENT

ಕೆರೆ ಉಳಿಸಿ

ಜಕ್ಕೂರು ಎಸ್.ನಾಗರಾಜು
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ಕೆರೆಗಳ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸುವ ಬಗ್ಗೆ ಹಾಗೂ ಕಲುಷಿತ ನೀರು ಸಂಸ್ಕರಿಸದೆ ನೇರವಾಗಿ ಕೆರೆಗೇ ಹರಿದು ಬರುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯಲ್ಲಿ ಮಾತು ಕೇಳಿಬರುತ್ತಿದೆ. ಹೀಗಿದ್ದರೂ ಬೆಂಗಳೂರಿಗೆ ಸ್ವಲ್ಪ ದೂರದ ದಾಸನಪುರ ಹೋಬಳಿಯ ‘ಕೆರೆಗುಡ್ಡದಹಳ್ಳಿ’ ಕೆರೆಯ ಮಾರಣಹೋಮ ಯಾರ ಕಣ್ಣಿಗೂ ಬಿದ್ದಂತಿಲ್ಲ.

ಕೆರೆಗುಡ್ಡದಹಳ್ಳಿ, ದಾಸಪ್ಪನಹಳ್ಳಿ ಮತ್ತು ಬಾಣವಾರ ಊರುಗಳ ತ್ಯಾಜ್ಯ ನೀರು ಕೆರೆಗೇ ಹರಿದು ಮಲಿನದಿಂದ ದುರ್ನಾತ ಬೀರುತ್ತಿದೆ. ಕಣ್ತಪ್ಪಿಸಿ ಕಟ್ಟಡಗಳ ತ್ಯಾಜ್ಯ, ಬೀದಿ ಕಸವನ್ನೂ ಸುರಿಯಲಾಗುತ್ತಿದೆ. ಇದರಿಂದಾಗಿ ದಿನೇದಿನೇ ಕೆರೆಯ ವಿಸ್ತೀರ್ಣ ಕಡಿಮೆಯಾಗುತ್ತಿರುವುದರ ಜೊತೆಗೆ ಕಳೆಹುಲ್ಲು ಬೆಳೆದು ಜಲರಾಶಿಯೇ ಕಾಣದಾಗಿದೆ.

ಬೆಂಗಳೂರು ನಗರದ ಸುತ್ತ ಇರುವ ಕೆರೆಗಳ ಅಭಿವೃದ್ಧಿ ಕೈಗೊಂಡಿರುವ ಸಂಬಂಧಪಟ್ಟ ಇಲಾಖೆ ಈ ಕೆರೆಗುಡ್ಡದಹಳ್ಳಿ (ದಾಸಪ್ಪನಪಾಳ್ಯ+ಬಾಣವಾರ) ಕೆರೆಯನ್ನು ಮರೆತಂತೆ ಕಾಣುತ್ತದೆ. ಇತ್ತ ಗಮನಹರಿಸಿ ಕೆರೆಯ ಹಿಂದಿನ ಸೊಬಗನ್ನು ಹೊದ್ದು ನಿರ್ಮಲ ಜಲರಾಶಿಯೊಂದಿಗೆ ನಗೆಬೀರುವಂತೆ ಮಾಡಬಹುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.