ADVERTISEMENT

ಗೋಹತ್ಯೆ ನಿಷೇಧ ಪ್ರಕೃತಿ ವಿರೋಧಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 19:30 IST
Last Updated 7 ಮಾರ್ಚ್ 2012, 19:30 IST

ಭೂಮಿಯ ಮೇಲಿನ ಎಲ್ಲ ಜೀವ ಸಂಕುಲಗಳನ್ನು ಸೃಷ್ಟಿಸಿರುವ ನಿಸರ್ಗ (ಆಸ್ತಿಕರಿಗೆ ಭಗವಂತ) ಅದರ ಸಮತೋಲನ ಕಾಪಾಡಿಕೊಳ್ಳುವ ವ್ಯವಸ್ಥೆಯನ್ನೂ ರೂಪಿಸಿದೆ.
 
ಹೀಗಾಗಿ ಒಂದು ಇನ್ನೊಂದರ ಆಹಾರ. ತಿನ್ನಲು ಯೋಗ್ಯವಾದ ಪ್ರಾಣಿಗಳನ್ನು ಕೊಂದು ತಿಂದರೆ ಅದು ಅಪರಾಧವಲ್ಲ. ತಿನ್ನುವವರನ್ನೂ, ತಿನ್ನುವಂತಹ ಪ್ರಾಣಿಗಳನ್ನೂ ಈ ಪ್ರಕೃತಿಯೇ ಸೃಷ್ಟಿಸಿದೆ.

ಕೃಷಿ ಮತ್ತು ಹೈನುಗಾರಿಕೆಗೆ ಬೇಕಾಗಿರುವ ಜಾನುವಾರುಗಳ ಸಂರಕ್ಷಣೆಯನ್ನು ವೈಜ್ಞಾನಿಕ ನೆಲೆಯಲ್ಲಿ ಮಾಡಬೇಕೆನ್ನುತ್ತದೆ ನಮ್ಮ ಸಂವಿಧಾನ. ಹುಲ್ಲು, ಪಶು ಆಹಾರದ ಕೊರತೆ ಇರುವುದರಿಂದ ದನಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಕೃಷಿ ಇಲಾಖೆ ಶಿಫಾರಸು ಮಾಡಿದೆ. ವೈಜ್ಞಾನಿಕ ಯುಗದಲ್ಲಿ ಗೋ ರಕ್ಷಣೆಯ ದೃಷ್ಟಿಯಿಂದ ಹಸುವನ್ನು ದೇವತೆ ಎಂದು ಒಪ್ಪುವುದು ಮೂರ್ಖತನ ಎಂದು  ಸಾವರ್ಕರ್ ಹೇಳಿದ್ದರು.

ಎನ್‌ಡಿಎ ಸರಕಾರದ ಅವಧಿಯ್ಲ್ಲಲೂ 13,05,000 ಟನ್ ಗೋ ಮಾಂಸ ರಫ್ತಾಗಿದೆ ಎಂದು ಪತ್ರಿಕೆಗಳಲ್ಲಿ ಓದಿದ ನೆನಪು. ಹಿಂದೊಮ್ಮೆ ನೀಲ್‌ಗಾಯಿ ಹೆಸರಿನ ಕಾಡು ಆಕಳಿನ ಹತ್ಯೆ ನಿಷೇಧಿಸಲಾಗಿತ್ತು. ನಂತರ ಅವುಗಳ ಸಂಖ್ಯೆ ಹೆಚ್ಚಾಯಿತು. ಅವು ಹೊಲಗದ್ದೆಗಳಿಗೆ ನುಗ್ಗಿ ಪೈರು ನಾಶಮಾಡತೊಡಗಿದಾಗ ನಿಷೇಧವನ್ನು ಹಿಂಪಡೆಯಲಾಯಿತು.

ಕರ್ನಾಟಕದಲ್ಲಿ ಹಾಲು ಮತ್ತು ಗೋ ಮಾಂಸ ಮತ್ತಿತರ ಉತ್ಪನ್ನಗಳ ಉತ್ಪಾದನೆ ನಡುವೆಯೂ ಗೋವುಗಳ ಸಮತೋಲನ ಕಾಪಾಡಿಕೊಂಡು ಬರಲಾಗಿದೆ. ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೆೀಶಿಸಿರುವ ನೂತನ ಕಾಯ್ದೆಯಿಂದ ಹೈನುಗಾರಿಕೆಯನ್ನು ನಂಬಿರುವ ರೈತರಿಗೆ ಮುದಿ ದನಗಳನ್ನು ಸಾಕುವ ಹೊರೆ ಬೀಳಲಿದೆ. ನಿಸರ್ಗದ `ಸಮತೋಲನ ವ್ಯವಸ್ಥೆ~ಗೆ ವಿರುದ್ಧವಾಗಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಬೇಕಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.