ADVERTISEMENT

ಜೀವ ತೆಗೆಯುವ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಉತ್ತರ ಕರ್ನಾಟಕದ ಕೆಲವು ಕಡೆ ಕಾರಹುಣ್ಣಿಮೆಯಂದು ಹೋರಿ ಬೆದರಿಸುವ ಸ್ಪರ್ಧೆ ನಡೆದರೆ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಇದು ದೀಪಾವಳಿಯಿಂದ ಆರಂಭಗೊಂಡು ಮೂರ‌್ನಾಲ್ಕು ತಿಂಗಳ ಕಾಲ ನಡೆಯುತ್ತದೆ. ರೈತರಿಗೆ ಖುಷಿ ಕೊಡುವ ಸಂಭ್ರಮವಾಗಿದ್ದ ಆಚರಣೆ ಈಗ ಜೀವ ತೆಗೆಯುವ ಸ್ಪರ್ಧೆಯಾಗಿ ಮಾರ್ಪಟ್ಟಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಹಾನಗಲ್ ತಾಲ್ಲೂಕಿನಲ್ಲಿ ಐದು ಸಾವುಗಳು ಸಂಭವಿಸಿವೆ. ಗ್ರಾಮೀಣ ಜನತೆಯ ಮನರಂಜನೆಗೆ ಸೀಮಿತವಾಗಿದ್ದ ಈ ಕ್ರೀಡೆ ಇಂದು ರಾಜಕೀಯ ವೈಷಮ್ಯ, ಕೋಮುಗಲಭೆ, ಜೀವಹಾನಿ ಅಲ್ಲದೆ ಹಣ ಮಾಡುವ ದಂಧೆಯಾಗಿದೆ. ದಾರಿ ತಪ್ಪಿದ ಈ ಹಬ್ಬದ ಆಚರಣೆಯಲ್ಲಿ ಸೂಕ್ತ ಬದಲಾವಣೆಯಾಗಬೇಕು.

ತಮಿಳುನಾಡಿನಲ್ಲಿ ಇದೇ ರೀತಿ ನಡೆಯುತ್ತಿದ್ದ `ಜಲ್ಲಿಕಟ್ಟು~ ಕ್ರೀಡೆಯಲ್ಲಿ ಜೀವಹಾನಿ ಸಂಭವಿಸಿದ್ದಾಗ ಅದನ್ನು ಕೋರ್ಟ್ ನಿಷೇಧಿಸಿತ್ತು. ನಂತರ ಜನರ ಒತ್ತಾಯಕ್ಕೆ ಮಣಿದು ಆಮೂಲಾಗ್ರ ಮಾರ್ಪಾಡು ಮಾಡಿ ಪ್ರಾಣಿ ದಯಾಸಂಘದ ಕಟ್ಟೆಚ್ಚರದಲ್ಲಿ ಕ್ರೀಡೆ ನಡೆಸಲು ಅನುಮತಿ ನೀಡಿದೆ.

ಕರ್ನಾಟಕದಲ್ಲಿಯೂ ಈ ಮಾದರಿ ಅನುಸರಿಸಬೇಕು. ಕ್ರೀಡೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಒಂದು ಗ್ರಾಮದಲ್ಲಿ ಒಮ್ಮೆ ಮಾತ್ರ ಕ್ರೀಡೆ ನಡೆಯಲಿ. ಹಣದ-ಜೂಜಿನ ವ್ಯವಹಾರಗಳು ನಡೆಯದಿರಲಿ. ಸ್ಪರ್ಧೆ ನಡೆಯುವಾಗ ವೈದ್ಯಕೀಯ ಹಾಗೂ ಪಶು ವೈದ್ಯಕೀಯ ಸೌಲಭ್ಯಗಳಿರಲಿ.

ಗ್ರಾಮೀಣ ಕ್ರೀಡೆಗಳ ಉದ್ದೇಶವೇ ಖರ್ಚಿಲ್ಲದ ಮನರಂಜನೆ. ಇದರಲ್ಲಿ ಜೀವಹಾನಿ- ಜೂಜು ನಡೆಯುತ್ತಿದ್ದರೆ ಅದನ್ನು ಸರ್ಕಾರ ತಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.