ಒಂದರಿಂದ ಏಳನೇ ತರಗತಿವರೆಗಿದ್ದ ಪ್ರಾಥಮಿಕ ಶಾಲೆಗಳಲ್ಲಿ ಹಲವನ್ನು ಸರ್ಕಾರ, ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಉನ್ನತೀಕರಿಸಿ ಎಂಟನೇ ತರಗತಿಯನ್ನು ಪ್ರಾರಂಭಿಸಿದೆ. ಪ್ರೌಢಶಾಲೆಯೊಂದಿಗಿದ್ದ ಎಂಟನೇ ತರಗತಿಗೆ ಬೋಧಿಸಲು ಬಿ.ಎಸ್ಸಿ., ಬಿ.ಎಡ್ ಆದ ಶಿಕ್ಷಕರನ್ನು ನೇಮಿಸಿದೆ. ಅವರು ಗಣಿತ, ವಿಜ್ಞಾನ ಬೋಧಿಸುತ್ತಾರೆ. ಉಳಿದ ವಿಷಯಗಳನ್ನು ಪ್ರಾಥಮಿಕ ಶಾಲಾ ಶಿಕ್ಷಕರೇ ಬೋಧಿಸುತ್ತಿದ್ದಾರೆ. ಈಚೆಗೆ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈ ಗಣಿತ, ವಿಜ್ಞಾನ ಬೋಧಿಸುವ ಶಿಕ್ಷಕರನ್ನೂ ನೇಮಿಸಲಾಗಿಲ್ಲ.
ಉನ್ನತೀಕರಿಸಿದ ಕೆಲವು ಪ್ರಾಥಮಿಕ ಶಾಲೆಗಳಲ್ಲಿ ಗಣಿತ, ವಿಜ್ಞಾನ ಬೋಧಿಸುತ್ತಿರುವ ಈ ಶಿಕ್ಷಕರಿಗೆ ಸಿ.ಬಿ.ಎಸ್.ಇ. ಮಾದರಿಯಂತೆ ‘ಟಿ.ಜಿ.ಟಿ. (Trained graduate teachers)– ಪಿ.ಸಿ.ಎಂ.’ ಎಂಬ ವಿಶಿಷ್ಟ ಹಣೆಪಟ್ಟಿ ನೀಡಿ, ಪ್ರತ್ಯೇಕಿಸಲಾಗಿದೆ.
2005ರಲ್ಲಿ ಹೊರತುಪಡಿಸಿ, ನಂತರದ ನೇಮಕಾತಿಗಳಲ್ಲಿ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆಂದೇ ಅರ್ಹತಾ ಪರೀಕ್ಷೆ ಬರೆದು ಉತ್ತೀರ್ಣರಾದ ಹಲವರನ್ನು ಈ ಟಿ.ಜಿ.ಟಿ. – ಪಿ.ಸಿ.ಎಂ. ಹುದ್ದೆಗೆ ನೇಮಕ ಮಾಡಲಾಗಿದೆ. ಅನೇಕರು ನೇಮಕಾತಿ ಆದಾಗಿನಿಂದ ಗ್ರಾಮೀಣ ಪ್ರದೇಶದಲ್ಲೇ ಕೆಲಸದಲ್ಲಿದ್ದಾರೆ. ಅವರಿಗೆ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗಳಿಗಷ್ಟೇ ವರ್ಗಾವಣೆ.
ಈಗ ಹೊಸ ನೇಮಕಾತಿ ಆಗುವಾಗ ಅವರಿಗೆ ಪ್ರೌಢಶಾಲಾ ಶಿಕ್ಷಕರಂತೆ ‘ಸಿ’ ಶ್ರೇಣಿ ಶಾಲೆಗಳಿಂದ ‘ಬಿ’ಗೂ ‘ಬಿ’ ಶ್ರೇಣಿ ಶಾಲೆಗಳಿಂದ ‘ಎ’ಗೂ ವರ್ಗಾವಣೆಗೆ ಅವಕಾಶ ನೀಡಿ ಅವರ ಸ್ಥಾನಗಳನ್ನು ಹೊಸ ನೇಮಕಾತಿಯಿಂದ ತುಂಬಬೇಕು. ಇಲ್ಲವಾದರೆ ಹಲವು ವರ್ಷಗಳಿಂದ ಸೌಕರ್ಯಗಳಿಲ್ಲದ ಸ್ಥಳದಲ್ಲಿ ದುಡಿಯುತ್ತಿರುವ ಅವರು ಅಲ್ಲೇ ನಿವೃತ್ತಿಯಾಗಬೇಕಾದ ಪರಿಸ್ಥಿತಿ ಒದಗುತ್ತದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.