ADVERTISEMENT

ತಪ್ಪಿದ್ದೆಲ್ಲಿ?

ಅಮೃತ ಸೋಮೇಶ್ವರ
Published 9 ಅಕ್ಟೋಬರ್ 2015, 19:30 IST
Last Updated 9 ಅಕ್ಟೋಬರ್ 2015, 19:30 IST

ಚಿಂತಕರೂ ನಿಷ್ಠುರ ವಿಮರ್ಶಕರೂ ಆದ ಪ್ರೊ. ಕೆ.ಎಸ್‌. ಭಗವಾನ್‌ ಅವರು, ಶ್ರೀರಾಮ, ಶ್ರೀಕೃಷ್ಣ ಮೊದಲಾದ ತಥಾಕಥಿತ ಅವತಾರ ಪುರುಷರ ಬಗೆಗೆ ಹಾಗೂ ಭಗವದ್ಗೀತೆ ಮೊದಲಾದ ಪ್ರಾಚೀನ ತತ್ವಶಾಸ್ತ್ರ ಗ್ರಂಥಗಳ ಬಗೆಗೆ ವ್ಯಕ್ತಗೊಳಿಸಿದ ಅಭಿಪ್ರಾಯಗಳು ಹಲವು ಸನಾತನಿಗಳೆನಿಸಿದವರನ್ನು ಸಿಟ್ಟಿಗೆಬ್ಬಿಸಿವೆ. ಕೆಲವು ಕಡೆ ಅವರ ಮೇಲೆ ಕೇಸುಗಳು ದಾಖಲಾಗಿವೆ. ಅವರಿಗೆ ಕೊಲೆ ಬೆದರಿಕೆಯೂ ಇದೆ. ಇದು ದುರದೃಷ್ಟಕರ.

ಒಂದು ಮುಖ್ಯ ವಿಷಯವೆಂದರೆ ಜಗತ್ತಿನಲ್ಲಿ ಯಾರೂ ಯಾವ ವಿಷಯವೂ ವಿಮರ್ಶಾತೀತವಾಗಬೇಕಿಲ್ಲ. ಯಾವುದೇ ಮತಗ್ರಂಥವಾಗಲೀ, ಮಹಾ ಪುರುಷರಾಗಲೀ ವಿಮರ್ಶೆಗೆ ಗುರಿಯಾದರೆ ಆಶ್ಚರ್ಯಪಡಬೇಕಾಗಿಲ್ಲ. ಒಂದು ದೃಷ್ಟಿಯಿಂದ ನೋಡಿದರೆ ಆರೋಗ್ಯಕರವಾದ ಚರ್ಚೆಗಳು ಯಾವುದೇ ವಿಚಾರದಲ್ಲಿ ನಡೆಯುವುದು ಲೇಸು.

ಭಗವದ್ಗೀತೆಯ ಕೊನೆಯಲ್ಲಿ ಶ್ರೀಕೃಷ್ಣನು ಅರ್ಜುನನಲ್ಲಿ  ಹೇಳುವ ಇದೊಂದು ಮಾತು ಲೆಕ್ಕಿಸತಕ್ಕುದಾಗಿದೆ. ‘ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾಕುರು’ (ವಿಮರ್ಶೆ ಮಾಡಿದ ಬಳಿಕ ನೀನು ಇಚ್ಛಿಸಿದಂತೆ ಮಾಡು)– ಹೀಗೆ ವಿಮರ್ಶಿಸಿ ಸ್ವೀಕರಿಸುವ ಅಥವಾ ನಿರಾಕರಿಸುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆಯೆಂಬುದೇ ಶ್ರೀಕೃಷ್ಣನ ಆಶಯವೆನ್ನಬೇಕು. ಭಗವಾನರು ತಮ್ಮ ನಿರೂಪಣೆಯ ವರಸೆಯನ್ನು ಒಂದಿಷ್ಟು ನಯಗೊಳಿಸುತ್ತಿದ್ದರೆ ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.