ADVERTISEMENT

ನಿಯಮಗಳನ್ನು ಕಲಬುರ್ಗಿ ಗಮನಿಸಲಿ

ಪ್ರಜಾವಾಣಿ ವಿಶೇಷ
Published 28 ಮೇ 2014, 19:30 IST
Last Updated 28 ಮೇ 2014, 19:30 IST

ರಾಜ್ಯ ಸರ್ಕಾರ ಕೊಡಮಾಡಿದ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿಗೆ (೨೦೧೨) ಸಂಬಂಧ­ಪಟ್ಟಂತೆ  (ವಾ.ವಾ, ಮೇ 27) ಪ್ರಕಟವಾದ ಪ್ರೊ. ಎಂ.ಎಂ. ಕಲಬುರ್ಗಿ­­­ಯವರ ಮಾತುಗಳು ದಿಕ್ಕು­ತಪ್ಪಿಸು­ವಂಥವು. ಬರೆ­ಯುವ ಮುನ್ನ ಬಸವ ಪುರಸ್ಕಾರದ ನೀತಿ, ನಿಯಮಗಳನ್ನು ಕಲಬುರ್ಗಿ­ಯವರು ಒಂದು ಬಾರಿ ಗಮನಿಸುವ ಜವಾ­ಬ್ದಾರಿ­ ತೋರಬೇಕಾಗಿತ್ತು.

ಬಸವ ಪುರಸ್ಕಾರಕ್ಕೆ ಸಂಬಂಧಿಸಿದ ನಿಯಮಗಳು ಹೀಗಿವೆ: ಈ ಪ್ರಶಸ್ತಿ ರಾಷ್ಟ್ರಮಟ್ಟದ್ದಾಗಿದ್ದು ಸರ್ವ­ಧರ್ಮ ಸಮಾನತೆ­ಗಾಗಿ ತನು ಮನ­ಗಳನ್ನು ಅರ್ಪಿ­ಸಿ­ಕೊಂಡ ವಿಶಿಷ್ಟ ವ್ಯಕ್ತಿಗಳಿಗೆ, ಅವರ ಕೊಡುಗೆ­ಯನ್ನು ಪರಿ­­­ಗಣಿಸಿ ಪ್ರತಿವರ್ಷ ನೀಡಲಾಗುತ್ತದೆ. ಈ ಪ್ರಶ­ಸ್ತಿಗೆ  ಯಾವುದೇ ರಾಜ್ಯದ ಸರ್ವಧರ್ಮ ಸಮಾ­ನತೆ­­ಗಾಗಿ ಸೇವೆ ಸಲ್ಲಿಸಿದ ವಿಶಿಷ್ಟ ವ್ಯಕ್ತಿಗಳು ಅರ್ಹ­ರಾಗಿ­ರುತ್ತಾರೆ. ಸಲಹಾ ಸಮಿತಿ ತನ್ನ ಶಿಫಾರಸನ್ನು ಸರ್ಕಾರಕ್ಕೆ ಸಲ್ಲಿಸು­ತ್ತದೆ. ಈ ಶಿಫಾರಸು­ಗಳು ಸರ್ಕಾ­ರದ ಪರಿ­ಶೀ­ಲನೆ, ಮಾರ್ಪಾಡು, ಅಂತಿಮ ನಿರ್ಣಯಕ್ಕೆಒಳ­ಪಟ್ಟಿರುತ್ತವೆ.

ಯು.ಆರ್. ಅನಂತಮೂರ್ತಿಯವರು ಜಾತಿವಾದ, ಕೋಮು­ವಾದ ಹಾಗೂ ಪುರೋಹಿತಶಾಹಿ ವಿರುದ್ಧ ನಿರಂ­ತರ ಹೋರಾಟ ಮಾಡುತ್ತ ಬಂದಿರುವವರು.  ಶೋಷಿತ, ಅಸ್ಪೃಶ್ಯ ಹಾಗೂ ತಳಸಮು­ದಾಯ­ಗಳ ಪರ ಹೋರಾ­ಟ­­­­ಗ­ಳಲ್ಲಿ ಎಂದಿಗೂ ಮುಂಚೂಣಿಯಲ್ಲಿ ಇರುವ ಇವರು ಬಸವಣ್ಣನವರು ಎತ್ತಿ­ಹಿಡಿದ ಸಮ­ಸಮಾ­ಜದ ತತ್ತ್ವ­­ವನ್ನು ನಮ್ಮ ಕಾಲದಲ್ಲಿ ಕ್ರಿಯಾತ್ಮಕ­ವಾಗಿ ಪ್ರತಿ­ಪಾ­ದಿಸುತ್ತಿ­ರುವವರು. ಸಮಾಜ­­ವಾದಿ ಧೋರಣೆ­ಗಳನ್ನು ಕನ್ನಡ ಸಮುದಾಯದಲ್ಲಿ ಬೆಳೆಸುತ್ತಿ­ರುವ ಕನ್ನಡದ ಹಿರಿಯರಲ್ಲಿ ಇವರು ಪ್ರಮುಖರು.  ತಮ್ಮ ಚಿಂತನೆ ಮತ್ತು ಸೃಜನಶೀಲ ಕೃತಿಗಳಲ್ಲಿ ಇಂಥ ತಾತ್ತ್ವಿಕ ಆಯಾ­ಮ­­­ಗ­ಳನ್ನು ಪ್ರಖರವಾಗಿ ಮೂಡಿಸಿದ­ವರು. ಅವರ ‘ಸಂಸ್ಕಾರ’, ‘ಭಾರತೀ­ಪುರ’ ಕೃತಿಗಳನ್ನು ಓದಿದವರಿಗೆ ಹೆಚ್ಚು ವಿವರಿಸಬೇಕಾದ ಅಗತ್ಯವಿಲ್ಲ.

ವಚನ ಚಳವಳಿಯು ಎತ್ತಿಹಿಡಿದ ಕನ್ನಡ ಭಾಷೆಯ ಬಳಕೆಯ ಪ್ರಾಮುಖ್ಯವನ್ನು ನಮ್ಮ ಕಾಲದಲ್ಲಿ ಮೊದಲಿ­­ನಿಂ­­ದಲೂ ಅನಂತಮೂರ್ತಿ ಒತ್ತಿ ಹೇಳಿದ­ವರು.  ಶಿಕ್ಷಣ­ದಲ್ಲಿ ಸಮಾ­ನತೆ­, ಕನ್ನಡ ಪರವಾದ ಧ್ವನಿ, ತಾತ್ವಿಕ ಚಿಂತನೆ­ಯನ್ನೂ ಎತ್ತುತ್ತಿರುವ ಅನಂತ­ಮೂರ್ತಿ, ಪ್ರಜಾ­­ಸತ್ತಾತ್ಮಕ ಆಯಾಮ­­ಗಳನ್ನು ದೃಢ­­ಗೊಳಿ­­ಸಲು ಕ್ರಿಯಾ­ಶೀಲ­ವಾಗಿರುವ­­­ವ­ರಲ್ಲಿ ಪ್ರಮುಖರು.

ಬಸವ ಪುರಸ್ಕಾರವನ್ನು ಪಡೆದವರ ಸಾಲಿನಲ್ಲಿ ಪ್ರಮುಖ­­ರಾದ  ಎ.ಪಿ.ಜೆ. ಅಬ್ದುಲ್ ಕಲಾಂ, ಸರ­ಸ್ವತಿ ಗೋರಾ, ಡಾ. ಎಚ್. ನರಸಿಂಹಯ್ಯ ಮುಂತಾ­ದ­ವರು ವಚನಗಳ ಬಗ್ಗೆ ಸಂಶೋಧನೆ, ಸಂಪಾ­­ದನೆ ಮಾಡಿದವ­ರೇನಲ್ಲ. ವಚನ ಚಳವಳಿಯ ಕೆಲವು ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಹೊಂದಿ­ದವ­ರಾಗಿದ್ದರು ಎನ್ನುವ ಕಾರಣ­ಕ್ಕಾಗಿಯೇ ಇವರಿಗೆ ಪ್ರಶಸ್ತಿ ಬಂದಿದೆ ಎಂದು ನಾವು ನಂಬಿದ್ದೇವೆ.  ಬೂಕರ್ ಪ್ರಶಸ್ತಿಗೆ ನಾಮಾಂ­ಕಿತ­ರಾಗಿದ್ದ ಅನಂತ­ಮೂರ್ತಿ­ಯವರು ತಮ್ಮ ಮೇಲೆ ಪ್ರಭಾವ ಬೀರಿದ್ದ ವ್ಯಕ್ತಿತ್ವ­ಗಳಲ್ಲಿ ಬಸವಣ್ಣನವರ ಹೆಸ­ರನ್ನು ಒಂದು ಸಂದ­ರ್ಶನದಲ್ಲಿ ಪ್ರಧಾನವಾಗಿ ಹೆಸ­ರಿಸಿ­­ದ್ದು­ದನ್ನೂ ಗಮ­ನಿಸ­ಬೇಕು. 

೨೦೦೩ರಲ್ಲಿ ಪ್ರಕಟ­­ವಾದ ಜಗದ್ಗುರು  ಶಿವರಾತ್ರೀಶ್ವರ ಗ್ರಂಥ­ಮಾಲೆಯ ವೀರ­ಶೈವ­ಧರ್ಮದರ್ಶನದ ಸಂಪುಟಗಳಿಗೆ  ಅನಂತಮೂರ್ತಿ­ಪ್ರಧಾನ ಸಂಪಾ­ದಕ­ರಾಗಿದ್ದರು.  ಈಗಲೂ ಪ್ರಮುಖ ಪರಾ­ಮ­ರ್ಶನ ಗ್ರಂಥಗಳಾಗಿರುವ ಇವುಗಳ ಮೌಲ್ಯ­ವನ್ನು ಓದುಗರು ಗಮನಿಸಬೇಕು. ಬಸವ ಪುರಸ್ಕಾರ ನೀಡಿ­ರುವ ಆಯ್ಕೆ ಸಮಿತಿಯ ತೀರ್ಮಾನವು ನಿಯಮಕ್ಕೆ ಎಂದೂ ವಿರೋಧ­ವಾಗಿಲ್ಲ ಮತ್ತು ಪಕ್ಷಪಾತದಿಂದ ನಡೆದು­­ಕೊಂಡಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇವೆ.

ಡಾ. ಕಲಬುರ್ಗಿ ತಮ್ಮ ಪತ್ರದಲ್ಲಿ ಸಮಿತಿ ಸದಸ್ಯ­ರು, ಅಧಿಕಾರಿಗಳು, ಸಚಿವರು ಹಾಗೂ ಸಭಿಕರನ್ನು ದೂಷಿಸಿದ್ದಾರೆ. ಅವರ ದೃಷ್ಟಿಯಲ್ಲಿ ಇವರೆಲ್ಲರೂ ಬೇಜವಾಬ್ದಾರಿ ಮತ್ತು  ಹಗರಣ ಮಾಡುವ ಜನರೆ?
ರಂಜಾನ್ ದರ್ಗಾ, ಬಸವರಾಜ ಕಲ್ಗುಡಿ,   ಮಲ್ಲೇಪುರಂ ವೆಂಕಟೇಶ್, ಗುರುಲಿಂಗ ಕಾಪಸೆ
(ಬಸವ ಪುರಸ್ಕಾರ ಆಯ್ಕೆ ಸಮಿತಿ ಸದಸ್ಯರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.