ADVERTISEMENT

ಪಿಳ್ಳಾರಿ ಗೀತೆಗಳ ಜನಕ ಪುರಂದರನೆ?

​ಪ್ರಜಾವಾಣಿ ವಾರ್ತೆ
Published 9 ಮೇ 2012, 19:30 IST
Last Updated 9 ಮೇ 2012, 19:30 IST

ಸೋಮವಾರದಂದು ಸುವರ್ಣ ವಾಹಿನಿಯಲ್ಲಿ ಬಿತ್ತರಗೊಂಡ `ಕನ್ನಡದ ಕೋಟ್ಯಾಧಿಪತಿ~ ಕಾರ್ಯಕ್ರಮದಲ್ಲಿ  ಪುನೀತ್ ರಾಜ್‌ಕುಮಾರ್ ಅವರು ರೇಖಾ ಎಂಬ ಅಭ್ಯರ್ಥಿಗೆ ಹಾಕಿದ ಪ್ರಶ್ನೆ ಹೀಗಿತ್ತು: `ಪಿಳ್ಳಾರಿ ಗೀತೆಗಳ ಜನಕ ಯಾರು?~ ಐಚ್ಛಿಕಗಳು ನಾಲ್ಕು. ಅದರಲ್ಲಿ ಕನಕ, ಪುರಂದರರ ಎರಡು ಹೆಸರುಗಳಿದ್ದವು.

ರೇಖಾ ಎನ್ನುವ ಅಭ್ಯರ್ಥಿ ಪಿಳ್ಳಾರಿ ಗೀತೆಗಳ ಜನಕ ಪುರಂದರ ಎಂದು ಹೇಳಿ, `ಲಂಬೋದರ ಲಕುಮಿಕರ~ ಎಂಬುದನ್ನು ಹಾಡಿದರು. ಆಗ ಪುನೀತ್  ಸರಿಯಾದ ಉತ್ತರ ಎಂದು ಹೇಳಿ ಹೊಗಳಿದರು.

ಆಗ ಹರಿದಾಸ ಸಾಹಿತ್ಯೇತಿಹಾಸವನ್ನೇ ಪುರಂದರೋತ್ತಾನಕ್ಕಾಗಿ ಬುಡಮೇಲು ಮಾಡಿ, ತೊಂಡುದನಗಳ ಆಡುಂಬೊಲವನ್ನಾಗಿ ಮಾಡಿರುವ ಪುನೀತಾತೀತ ಚೂರ್ಣ ಪ್ರಜ್ಞರ ಕೈವಾಡವನ್ನು ಗ್ರಹಿಸುವಲ್ಲಿ ಪುನೀತ್ ರಾಜ್‌ಕುಮಾರ್ ಸೋತಿದ್ದಾರೆ ಎನ್ನಿಸಿತು.

ಪಿಳ್ಳಾರಿ ಎಂದರೆ ಗಣಪತಿ. ಇಂದಿಗೂ ಹಳ್ಳಿಗಳಲ್ಲಿ ಲಿಂಗಾಕಾರದಲ್ಲಿ ಸಗಣಿ ಉಂಡೆ ಮಾಡಿ, ಅದರ ನೆತ್ತಿಗೆ ಗರಿಕೆ ಪತ್ರೆಯನ್ನು ಸಿಕ್ಕಿಸಿ, ಪಿಳ್ಳಾರಿ ಎಂದು ಕೈಮುಗಿದು ಮುಂದಿನ ಕೆಲಸಕ್ಕೆ ತೊಡಗುತ್ತಾರೆ. ಪಿಳ್ಳಾರಿ ಗೀತೆಗಳ ಜನಕ ಪುರಂದರ ಎಂಬುದು `ಪಚ್ಛಪಸಿಯ ಪುಸಿ!~; ಪುರಂದರ ಬೆದರು ಬೊಂಬೆಯ ವೈಭವೀಕರಣ.

ಪಾವಂಜೆ ಗುರುರಾಯರ ಪುರಂದರ ಸಂಪುಟಗಳಲ್ಲಿ ,ಸಾ. ಕೃ. ರಾಜೇಂದ್ರರಾಯರ ಪುರಂದರ ಸಂಪುಟಗಳಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಕಟಿತವಾದ ಪುರಂದರ ಸಂಪುಟಗಳಲ್ಲಿ ನಾಲ್ಕೈದು ಗಣಪತಿ ಸ್ತೋತ್ರಗಳಿವೆ.

ಅವುಗಳಲ್ಲಿ `ಶರಣು ಶರಣು~ ಹಾಗೂ `ಶರಣು ಶರಣು ಸಿದ್ಧಿವಿನಾಯಕ~ ಎಂಬ ಎರಡು ಕೀರ್ತನೆಗಳು ಕನಕದಾಸರವು; ಕರ್ನೆಲ್ ಮೆಕೆಂಜೆ ಸಂಗ್ರಹದಿಂದ ಅದು ದೃಢವಾಗುತ್ತದೆ, ಆದರೆ ಕನಕನ `ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮಳಗಿಹನ್ಯಾರಮ್ಮ~, `ಶರಣು ಶರಣು~ ಹಾಗೂ `ಶರಣು ಶರಣು ಸಿದ್ಧಿ ವಿನಾಯಕ~ ಎಂಬ ಮೂರು ಕೀರ್ತನೆಗಳನ್ನು ಗಟ್ಟಿಯಾದಂಥವು.

ಪುರಂದರ ಹೆಸರಲ್ಲಿ ಉಳಿದಂಥವು ಜಳ್ಳು, ಲೊಳಲೊಟ್ಟೆಯಂಥವು. ಕನಕನ ಇನ್ನೂರು ಕೀರ್ತನೆಗಳ ಮಡೆಗೂಳನ್ನು ಪುರಂದರ ಹೊಡೆ (ಹೊಟ್ಟೆ)ಗೆ ಹಿಡಿದಿರುವ ಸತ್ಯ ಜಗಜ್ಜಾಹೀರು ಆಗಿರುವಾಗ, ಪಿಳ್ಳಾರಿ ಗೀತೆಗಳ ಜನಕ ಪುರಂದರ ಎಂದು ಡಂಗುರ ಸಾರುವ ಕಾರ್ಯಕ್ರಮದ ಗುರು ಭೇದವಾದಿಗಳೆ? ಬೇರೆಯವರಾಗಿದ್ದರೆ ಹೀಗೆ `ಸಂಧೀಲಿ ಸಮಾರಾಧನೆ~ ಮಾಡಿ ಪುರಂದರ ಬೆದರು ಬೊಂಬೆಯನ್ನು ಹರಿದಾಸ ಸಾಹಿತ್ಯ ಸೌಧಕ್ಕೆ ನೇತು ಹಾಕಲು ಹೋಗುತ್ತಿರಲಿಲ್ಲ.

ಅಂದಿನ ಪೂರ್ಣಪ್ರಜ್ಞರೆಲ್ಲಿ? ಇಂದಿನ ಚೂರ್ಣಪ್ರಜ್ಞರೆಲ್ಲಿ? ಪ್ರಶ್ನೋತ್ತರದ ಗುರುಗಳು, ಕರ್ನಾಟಕದ ಹಾಗೂ ಅನ್ಯಪ್ರಾಂತ್ಯಗಳ ಅಸಂಖ್ಯ ಕನ್ನಡಿಗರಿಗೆ ಸತ್ಯ ಸಂಗತಿಯನ್ನು ಹೇಳಿ, ತಮ್ಮ ಉತ್ತರಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಬೇಕೆಂದು ವಿನಂತಿಸುತ್ತೇನೆ.
 
ಒಂದು ಪಕ್ಷ `ಕೋಟ್ಯಾಧಿಪತಿ~ ಕಾರ್ಯಕ್ರಮದ ಗೋಪ್ಯವೆಂಬ ದೃಷ್ಟಿಯಿಂದ ಗುರುಗಳ ಹೆಸರು ಬೆಳಕಿಗೆ ಬರುವುದು ಸಲ್ಲದು ಎನ್ನುವುದಾದರೆ, ಗುರುಗಳೊಡನೆ ಸಮಾಲೋಚಿಸಿ ಆ ಕೆಲಸವನ್ನು ಪುನೀತ್ ರಾಜ್‌ಕುಮಾರ್ ಅವರೇ ನಿರ್ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.