ಶ್ರೀರಂಗಪಟ್ಟಣದ ಐತಿಹಾಸಿಕ ಸ್ಮಾರಕಗಳ ನಿರ್ವಹಣೆಯನ್ನು ರಾಜ್ಯ ಪುರಾತತ್ವ ಇಲಾಖೆ ನೋಡಿಕೊಳ್ಳುತ್ತಿದೆ. ಸ್ಮಾರಕಗಳ ಸುತ್ತ ಮುತ್ತ 100 ಮೀಟರ್‌ಗಳ ವ್ಯಾಪ್ತಿಯ ಖಾಸಗಿ ಕಟ್ಟಡಗಳನ್ನು ತೆರವುಗೊಳಿಸುವ ಸಾಧ್ಯತೆ ಕುರಿತು ಇಲಾಖೆ ಆಗಾಗ ಕರಪತ್ರಗಳನ್ನು ಹೊರಡಿಸಿ ಆತಂಕ ಹುಟ್ಟಿಸುತ್ತಿದೆ. ಇದು ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬ ಗಾದೆಯನ್ನು ನೆನಪಿಸುತ್ತದೆ.
ಸ್ಮಾರಕಗಳಿಂದ 100 ಮೀಟರ್‌ವರೆಗೆ ಯಾವುದೇ ಕಟ್ಟಡ ಇರುವಂತಿಲ್ಲವೆಂದು ಪುರಾತತ್ವ ಇಲಾಖೆಯ ನಿರ್ಧಾರ ಮಾಡಿದಂತಿದೆ. ಇಲಾಖೆಯ ಅಧಿಕಾರಿಗಳು ಪಟ್ಟಣದ ಬೀದಿ ಬೀದಿಗಳಲ್ಲಿ ಸರ್ವೆ ನಡೆಸಿ ಮನೆಗಳಿಗೂ ಸ್ಮಾರಕಗಳೂ ಇರುವ ಅಂತರವನ್ನು ಅಳತೆ ಮಾಡುತ್ತ ಆಗಾಗ ಜನರಲ್ಲಿ ಆತಂಕ ಹುಟ್ಟಿಸುತ್ತಾರೆ.
ಇದರ ವಿರುದ್ಧ ಜನರು ಪ್ರತಿಭಟನೆ, ಬಂದ್ ಇತ್ಯಾದಿ ನಡೆಸಿದ್ದಾರೆ. ಕಟ್ಟಡಗಳ ತೆರವು ಕುರಿತಂತೆ ಜನರಲ್ಲಿ ಇರುವ ಆತಂಕವನ್ನು ಹೋಗಲಾಡಿಸುವಂತೆ ಇಲಾಖೆಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. 300 ಮೀಟರ್ ಅಂತರ ಬಿಟ್ಟು ಇಲಾಖೆಯ ಅನುಮತಿ ಪಡೆದು ಕಟ್ಟಡ ನಿರ್ಮಿಸಬಹುದೆಂದು ಅಧಿಕಾರಿಗಳು ಹೇಳುತ್ತಾರೆ.
ಆದರೆ ಇಂತಹ ಕಟ್ಟಡಗಳು ಸುರಕ್ಷಿತವೇ ಎಂಬ ಬಗ್ಗೆ ಖಚಿತ ಭರವಸೆ ಸಿಗುತ್ತಿಲ್ಲ. ಶ್ರೀರಂಗಪಟ್ಟಣದಲ್ಲಿ ಸ್ಮಾರಕಗಳೇ ದಂಡೇ ಇದೆ. 300 ಮೀಟರ್ ವ್ಯಾಪ್ತಿಯ ಲೆಕ್ಕ ಹಾಕಿದಲ್ಲಿ ಸಂಪೂರ್ಣ ಪಟ್ಟಣವೇ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಇಡೀ ಊರನ್ನೇ ಒಂದು ಮ್ಯೂಸಿಯಂ ಮಾಡುವ ದುರಾಲೋಚನೆ ಇಲಾಖೆಗೆ ಇದೆಯೆ? ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.