ADVERTISEMENT

ಪೂರ್ಣ ಸತ್ಯವಲ್ಲ!

ವೆಂಕಟೇಶ ಮಾಚಕನೂರ
Published 10 ಜೂನ್ 2018, 19:52 IST
Last Updated 10 ಜೂನ್ 2018, 19:52 IST

ಚೀನಾ ಕುರಿತು ರಾಮಚಂದ್ರ ಗುಹಾ ಅವರು ಬರೆದ ‘ಚೀನಾ: ಆತ್ಮವಿಲ್ಲದ ಸೂಪರ್ ಪವರ್’ (ಪ್ರ.ವಾ., ಜೂನ್‌ 8) ಲೇಖನ ಮುಖ್ಯವಾಗಿ ಚೀನಾದ ಸಾಹಿತ್ಯ, ಸಂಸ್ಕೃತಿಗಳನ್ನು ಗಮನದಲ್ಲಿಟ್ಟು ಬರೆದ ಲೇಖನವಾಗಿದ್ದು, ಪೂರ್ಣ ಸತ್ಯವನ್ನು ಬಿಂಬಿಸುವುದಿಲ್ಲ.

ದೀರ್ಘ ಇತಿಹಾಸ ಮತ್ತು ಭವ್ಯ ಪರಂಪರೆಯನ್ನು ಹೊಂದಿರುವ ಚೀನಾ, ಪ್ರತಿಯೊಂದು ರಂಗದಲ್ಲಿ ಸಾಧಿಸಿರುವ ಬೆಳವಣಿಗೆಯನ್ನು ಅವರು ಪರಿಗಣಿಸಿದಂತೆ ಕಾಣಿಸುವುದಿಲ್ಲ. ಚೀನಾದ ಸಾಧನೆಯನ್ನು ಅದರ ಐತಿಹಾಸಿಕ ಹಿನ್ನೆಲೆಯಲ್ಲಿ ಗಮನಿಸಬೇಕು.

ಚೀನಾದ ಮೇಲೆ ಪಾಶ್ಚಿಮಾತ್ಯ ದೇಶಗಳ ಆಕ್ರಮಣ, ಎರಡನೇ ಮಹಾಯುದ್ಧದ ಕಾಲದಲ್ಲಿ ಜಪಾನ್‌ ನಡೆಸಿದ ದಾಳಿ– ದೌರ್ಜನ್ಯಗಳು, ದೀರ್ಘ ಕಾಲದ ಆಂತರಿಕ ಕದನಗಳು ಚೀನಾವನ್ನು ನಲುಗಿಸಿ ಬಿಟ್ಟಿದ್ದವು. ಮಾವೊ ನೇತೃತ್ವದಲ್ಲಿ ಹೋರಾಡಿ ಇವೆಲ್ಲವುಗಳಿಂದ 1949ರಲ್ಲಿ ಬಿಡುಗಡೆಗೊಂಡ ಚೀನಾ, ಅಭಿವೃದ್ಧಿಯತ್ತ ದಾಪುಗಾಲು ಹಾಕಿದ್ದು ಸಣ್ಣ ಸಾಧನೆಯೇನಲ್ಲ.

ADVERTISEMENT

ಕಠಿಣ ಪರಿಶ್ರಮ, ಅಗಾಧ ತಾಂತ್ರಿಕ ಬೆಳವಣಿಗೆಯಿಂದಾಗಿ ಮೂರ್ನಾಲ್ಕು ದಶಕಗಳಲ್ಲಿ ಚೀನಾ ಈ ಸಾಧನೆ ಮಾಡಿದೆ. ರಾಜಕೀಯವಾಗಿ, ವೈಯಕ್ತಿಕವಾಗಿ ಚೀನಾದ ಜನ ಅದಕ್ಕೆ ಬೆಲೆ ತೆತ್ತಿದ್ದಾರೆ ಎಂಬುದು ಬೇರೆ ವಿಷಯ. ತಮ್ಮ ಭಾಷೆ, ಸಂಸ್ಕೃತಿಗಳನ್ನು ಬಲಿಕೊಡದೇ ಅವರು ಸಾಧಿಸಿದ ಯಶಸ್ಸು ಪ್ರಶಂಸನೀಯ.

ಕ್ರಿಕೆಟ್, ಫುಟ್ಬಾಲ್ ಆಟಗಳಿಂದಲೇ ಚೀನಾವನ್ನು ಅಳೆಯಬೇಕಿಲ್ಲ. ಪಾಶ್ಚಿಮಾತ್ಯ ದೇಶಗಳ ಸಾಧನೆ, ಅಭಿವೃದ್ಧಿಯ ಮಾನದಂಡಗಳನ್ನು ಅನ್ವಯಿಸುವಾಗ ಆ ದೇಶಗಳ ಶೋಷಣೆಯ ಮುಖವನ್ನು ಮರೆಮಾಚಲಾಗದು.

ನಾವು ಇತ್ತೀಚೆಗೆ ಚೀನಾ ದೇಶಕ್ಕೆ ಭೇಟಿ ನೀಡಿದ್ದಾಗ ಅದರ ಅಪ್ರತಿಮ ಭೌತಿಕ ಬೆಳವಣಿಗೆ ಕಂಡು ಬೆರಗಾದೆವು. ಮಹಾ ಗೋಡೆ, ಗ್ರ್ಯಾಂಡ್‌ ಕೆನಾಲ್‌ಗಳು ಚೀನೀಯರಿಂದ ಮಾತ್ರ ನಿರ್ಮಿಸಲು ಸಾಧ್ಯವೇನೋ ಎಂದೆನಿಸುವಂಥ ಮಹಾ ನಿರ್ಮಾಣಗಳು. ಚೀನಾದಲ್ಲೂ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಸೃಜನಶೀಲವಾಗಿ ಬೆಳೆಯಲು ಅವಕಾಶ ಸಿಗುತ್ತದೆ. ಆದ್ದರಿಂದ ಚೀನಾ ಆತ್ಮವಿಲ್ಲದ ಮಹಾಶಕ್ತಿ ಎನ್ನುವುದರಲ್ಲಿ ಹುರುಳಿಲ್ಲ.

ದೇವರು, ಧರ್ಮದಲ್ಲಿ ನಂಬಿಕೆಯಿಲ್ಲದ ಚೀನಾದ ಮುಕ್ಕಾಲುವಾಸಿ ಜನರು ಚೀನಾವನ್ನು ಮತ್ತೊಂದು ರೀತಿಯಲ್ಲಿ ಆತ್ಮವಿಲ್ಲದ ದೇಶದಂತೆ ಮಾಡಿದ್ದಾರೆ ಅನ್ನಿಸಬಹುದು. ಆದರೆ ದುಡಿಮೆಯೇ ದೇವರು ಅನ್ನುವ ದೇಶಕ್ಕೆ ಧರ್ಮ– ದೇವರುಗಳ ಹಂಗಾದರೂ ಏನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.