ಮಹಾಶಿವರಾತ್ರಿ ಹಬ್ಬದಂದು ಸಂಜೆ 7 ಗಂಟೆಯಲ್ಲಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಹೋಗಿ ಬೆಟ್ಟದ ಮೇಲಿನ ಈಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತ ಮೆಟ್ಟಿಲು ಹತ್ತಿ ಹೋದೆವು. ಮೇಲ್ಭಾಗದಲ್ಲಿ ಜನಸಂದಣಿಯಿಂದ ಉದ್ದನೆಯ ಸಾಲು ಇತ್ತು.
ನಮ್ಮ ತಾಯಿಯವರು ಅನಾರೋಗ್ಯದ ಕಾರಣ ಮೆಟ್ಟಿಲು ಹತ್ತುವುದು ತಡವಾಯಿತು. ಅವರು ಬರುವವರೆಗೂ ಮೇಲ್ಭಾಗದಲ್ಲಿ ನಿಲ್ಲಬೇಕಾಯಿತು. ಆ ಸಂದರ್ಭದಲ್ಲಿ ಸಾಮಾನ್ಯ ಉಡುಪಿನಲ್ಲಿದ್ದ ಪೊಲೀಸರೊಬ್ಬರು ಸಾಲಿನಲ್ಲಿ ನಿಲ್ಲುವಂತೆ ಸೂಚಿಸಿದರು. ನಮ್ಮ ತಾಯಿಯವರು ಬರುತ್ತಿದ್ದಾರೆ ಬಂದ ನಂತರ ಎಲ್ಲರೂ ಒಟ್ಟಾಗಿ ನಿಲ್ಲುತ್ತೇವೆ ಎಂದು ಮನವಿ ಮಾಡಿಕೊಂಡೆವು.
ಆದರೆ ಅವರು ಸಹನೆ ಕಳೆದುಕೊಂಡವರಂತೆ ದರ್ಪದಿಂದ ಮಹಿಳೆ ಎನ್ನುವುದನ್ನು ಮರೆತು ಅಸಹ್ಯವಾಗಿ ನಮ್ಮನ್ನು ಬೈದರು ಕೈಹಿಡಿದು ನೂಕಿದರು. ಇದನ್ನು ಪ್ರತಿಭಟಿಸಿದ ಅಲ್ಲಿದ್ದ ಕೆಲವು ಭಕ್ತಾದಿಗಳನ್ನು ಸಹ ಬಾಯಿಗೆ ಬಂದಂತೆ ಬೈಯ್ದರು. ಇದರಿಂದ ನಮ್ಮ ಮನಸ್ಸಿಗೆ ಬೇಸರವಾಗಿ ದೇವರ ದರ್ಶನವನ್ನು ಮಾಡದೇ ನಾವು ವಾಪಸ್ಸು ಬರಬೇಕಾಯಿತು.
ಮಹಿಳಾ ದಿನಾಚರಣೆಯನ್ನು ವೇದಿಕೆಯಲ್ಲಿ ವೈಭವದಿಂದ ಆಚರಿಸುವ ಸರ್ಕಾರ ಪೊಲೀಸರು ಮಹಿಳೆಯರ ಮತ್ತು ಸಾರ್ವಜನಿಕರೊಂದಿಗೆ ಕನಿಷ್ಠ ಸೌಜನ್ಯದಿಂದಲಾದರೂ ವರ್ತಿಸುವಂತೆ ತರಬೇತಿ ತಿಳುವಳಿಕೆ ನೀಡಬೇಕಾಗಿ ಕೋರಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.