ADVERTISEMENT

ಪ್ರತ್ಯೇಕ ಬಸ್ ಬಿಡಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ಉದ್ಯೋಗಸ್ಥ ಮಹಿಳೆಯರು, ಶಾಲಾ ಕಾಲೇಜು ಮಕ್ಕಳು ಮತ್ತು ರೋಗ ರುಜಿನಗಳಿಂದ ನರಳುತ್ತಿರುವ ವಯಸ್ಸಾದವರು ನಿತ್ಯದ ಕೆಲಸ ಕಾರ್ಯಗಳಿಗೆ ಬಿಎಂಟಿಸಿ ಬಸ್‌ಗಳನ್ನು ಬಳಸುವುದನ್ನು ಕಾಣಬಹುದು.

ಆದರೆ ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಮೀಸಲಿರುವ ಆಸನಗಳನ್ನು ಕೈಕಾಲು ಗಟ್ಟಿಮುಟ್ಟಾಗಿರುವ ಪುರುಷರು ಆಕ್ರಮಿಸಿಕೊಂಡು ನೀಡುತ್ತಿರುವ ತೊಂದರೆ ವರ್ಣಿಸಲು ಸಾಧ್ಯವಿಲ್ಲ. ಅನೇಕ ವರ್ಷಗಳಿಂದ ನಾನು ದಿನಾ ಬಸ್ಸಿನಲ್ಲಿ ಓಡಾಡುತ್ತಿದ್ದೇನೆ.

ತನಿಖಾಧಿಕಾರಿಗಳಂತೂ ವರ್ಷಕ್ಕೊಮ್ಮೆ ಬಂದರೆ ಅದೇ ಹೆಚ್ಚು. ಇದರಿಂದಾಗಿ ಸೀಟು ಆಕ್ರಮಿಸುವ ಪ್ರಯಾಣಿಕರಿಗೆ  ಭಯವೇ ಇಲ್ಲವಾಗಿದೆ. ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನ ಆಗದಿರುವುದು ಶೋಚನೀಯ.

ಇವರುಗಳ ಕಾಟದಿಂದ ಪಾರಾಗಬೇಕಾದರೆ, ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಸಲುವಾಗಿಯೇ ಎಲ್ಲಾ ಬಡಾವಣೆಗಳಿಂದ ಬೆಳಿಗ್ಗೆ 8 ರಿಂದ 9 ಗಂಟೆಯ ವರೆಗೆ ಪ್ರತ್ಯೇಕ ಬಸ್‌ಗಳನ್ನು ಬಿಡಬೇಕು.

ಬಿಎಂಟಿಸಿಗೆ ಹಣ ಸಂಪಾದನೆಯಲ್ಲಿರುವ ಆಸಕ್ತಿ ಪ್ರಯಾಣಿಕರಿಗೆ ದೊರಕಬೇಕಾದ ಸೌಲಭ್ಯ ಕಲ್ಪಿಸುವಲ್ಲಿಯೂ ಇರಲಿ . ಪರಮಾತ್ಮನು ಸಂಬಂಧಪಟ್ಟವರಿಗೆ ಅಂಥ ಮನಸ್ಸು ಕೊಡಲಿ ಎಂದು ನನ್ನ ಪ್ರಾರ್ಥನೆ.
 - ಕೆ. ಆರ್. ರಾಘವೇಂದ್ರ ರಾವ್

ರಸ್ತೆಯಲ್ಲೇ ಹಸು, ಕರು
ಕಬ್ಬನ್‌ಪೇಟೆಯ 1ನೇ ಅಡ್ಡರಸ್ತೆಯ ಮನೆಗಳ ಸುತ್ತಮುತ್ತ ಹಸು ಸಾಕುವವರು ದನ, ಕರುಗಳನ್ನು ರಸ್ತೆಯಲ್ಲೇ  ಕಟ್ಟಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಚಾಲಕರಿಗೆ ಈ ರಸ್ತೆಯಲ್ಲಿ ಓಡಾಡಲು ತೊಂದರೆಯಾಗುತ್ತಿದೆ.
 
ಇವುಗಳ ಸಗಣಿ - ಗಂಜಳ ವಿಸರ್ಜನೆಯಿಂದ ಸುತ್ತಮುತ್ತಲ ನಾಗರಿಕರಿಗೆ ಕಿರಿಕಿರಿಯಾಗುತ್ತಿದೆ. ಇದರಿಂದ ಸೊಳ್ಳೆ, ನೊಣ, ಕ್ರಿಮಿಕೀಟಗಳು ಹೆಚ್ಚುತ್ತಿದ್ದು ಇದರಿಂದ ಮಾರಣಾಂತಿಕ ರೋಗಗಳು ಹರಡುವ ಸಂಭವ ಇರುತ್ತದೆ.

ಈ ಸ್ಥಳವನ್ನು ಕಾರ್ಪೊರೇಟರ್ ಕೂಡ ಬಂದು ಸಮೀಕ್ಷೆ ಮಾಡಿರುತ್ತಾರೆ. ನಾವೂ ಕೂಡ ಬಿ.ಬಿ.ಎಂ.ಪಿ.ಗೆ ಮೂರ‌್ನಾಲ್ಕು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಸಂಬಂಧಪಟ್ಟ ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಮನವಿ.
 - ನೊಂದ ನಿವಾಸಿಗಳು

ತಿಪ್ಪೆಗುಂಡಿ ತೆರವುಗೊಳಿಸಿ
ಕಲ್ಯಾಣನಗರ ವಿಧಾನ ಸಭೆ ಕ್ಷೇತ್ರಕ್ಕೆ ಸೇರಿದ ವಾರ್ಡ್ ಸಂಖ್ಯೆ 27 ರಲ್ಲಿರುವ ಕಮ್ಮನಹಳ್ಳಿ ಪಾರ್ಕ್‌ನಲ್ಲಿ ವಿಪರೀತ ಸೊಳ್ಳೆಕಾಟ ಮತ್ತು ದುರ್ವಾಸನೆ.

ಈ ಉದ್ಯಾನದಲ್ಲಿ ಮಕ್ಕಳ ಆಟದ ಮೈದಾನವಿದೆ. ಅದರ ಹೊರಗಡೆ ತಿಪ್ಪೆಗುಂಡಿ ಮಾಡಿದ್ದಾರೆ. ಅದರಲ್ಲಿ ಕಸ, ಎಲೆ ಕಡ್ಡಿಗಳು ಕೊಳೆತು ದುರ್ನಾತ ಬರುತ್ತಿದೆ. ವಾಕಿಂಗ್ ಮಾಡುವವರಿಗೆ, ಆಟ ಆಡುವ ಚಿಕ್ಕ ಮಕ್ಕಳಿಗೆ ಇದರಿಂದ ತೊಂದರೆ. ತಿಪ್ಪೆಗುಂಡಿಯಲ್ಲಿರುವ ಕಸದ ರಾಶಿಯಿಂದ ಆಗುವ ಕಾಟ ಹೇಳತೀರದ್ದು.


ಬಿಬಿಎಂಪಿ ಮತ್ತು ತೋಟಗಾರಿಕೆ ಇಲಾಖೆಯವರು ತುರ್ತಾಗಿ ಈ ಕಸವನ್ನು ಆಗಾಗ್ಗೆ ಸ್ವಚ್ಛಗೊಳಿಸಿದರೆ ಸೊಳ್ಳೆಗಳ ಕಾಟ ಮತ್ತು ದುರ್ವಾಸನೆ ತಪ್ಪಿಸಬಹುದು. ಇಲ್ಲಿ ಕಸ ಕಡ್ಡಿ ಹಾಕುವುದನ್ನು ಬೇರೆ ಕಡೆ ಸ್ಥಳಾಂತರಿಸಿ ಪಾರ್ಕ್ ನೈರ್ಮಲ್ಯ ಉಳಿಸಬೇಕೆಂದು ಮನವಿ.
 - ಕೆ. ನಾಗರಾಜನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT