ADVERTISEMENT

ಬಡತನದ ಅವಾಸ್ತವಿಕ ಚಿತ್ರಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಇತ್ತೀಚೆಗೆ ಕೇಂದ್ರ ಯೋಜನಾ ಆಯೋಗವು ದೇಶದ ಮಹಾನಗರಗಳಲ್ಲಿ ದಿನಕ್ಕೆ 32 ರೂಗಳನ್ನು ತಮ್ಮ ದಿನಬಳಕೆಗಾಗಿ ಖರ್ಚು ಮಾಡುವವರು ಬಡವರು.
 
ಇದಕ್ಕಿಂತ ಒಂದು ರೂಪಾಯಿ ಜಾಸ್ತಿ ಖರ್ಚು ಮಾಡಿದರೂ ಅವರು ಶ್ರಿಮಂತರು, ಅವರಿಗೆ ಸರ್ಕಾರದ ಯಾವುದೇ ಸಬ್ಸಿಡಿ ಸೌಲಭ್ಯ ಹಾಗು ಬಿಪಿಎಲ್ ಕಾರ್ಡ್ ಕೊಡಬೇಕಾಗಿಲ್ಲ ಎಂಬ ನಗೆಪಾಟಲಿನ ವರದಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದೆ.

ದೆಹಲಿ-ಮುಂಬೈಯಂತಹ ಮಹಾನಗರಗಳಲ್ಲಿ ದಿನಕ್ಕೆ 32 ರೂಪಾಯಿಗಳಲ್ಲಿ ಜೀವನ ನಡೆಸುವವರು ಸರ್ಕಾರದ ದೃಷ್ಟಿಯಲ್ಲಿ ಶ್ರಿಮಂತರು. ಯೋಜನಾ ಆಯೋಗದ  ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಯಾವ ಮಾನದಂಡ ಅನುಸರಿಸಿ ಈ ನಿರ್ಧಾರಕ್ಕೆ ಬಂದರೋ ಆ ದೇವರೇ ಬಲ್ಲ.

ಆಯೋಗವು ನೀಡಿದ ಅಂಕಿ ಅಂಶಗಳನ್ನು ಅವಲೊಕಿಸಿದರೆ ಯಾರಿಗೆ ಆಗಲಿ ತಲೆತಿರುಗುವುದು ಗ್ಯಾರಂಟಿ.ಆಯೋಗವು ಪ್ರಧಾನಿಯವರ ಅನುಮತಿ ಪಡೆದು ಈ ವರದಿಯನ್ನು ಸಲ್ಲಿಸಿದೆ.

ಆಡಳಿತ ನಡೆಸುತ್ತಿರುವ ಪಕ್ಷಗಳಿಗೆ ಜನಪರ ಕಾಳಜಿ ಎಷ್ಟಿದೆಯೆನ್ನುವುದು ಇದರಿಂದ ವ್ಯಕ್ತವಾಗುತ್ತದೆ. ಬೆಲೆಯೇರಿಕೆ ಬಿಸಿಯಿಂದ ಬೆಂದು ಬಸವಳಿಯುತ್ತಿರುವ ಜನರಿಗೆ ಇದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.
 
ಜಾಗತಿಕ ಮಟ್ಟದಲ್ಲಿ ಭಾರತದ ಬಡಜನರ ಸಂಖ್ಯೆಯನ್ನು ಕಡಿಮೆ ತೋರಿಸುವ ಹಪಾಹಪಿಯಲ್ಲಿ ಸಾಮಾನ್ಯ ಜನರ ತಲೆಮೇಲೆ ಕಲ್ಲುಚಪ್ಪಡಿಯನ್ನು ಹಾಕ ಹೊರಟಿರುವ ಸರ್ಕಾರದ ಈ ಕ್ರಮ ಖಂಡನಾರ್ಹ. 
 
ಈ ಹಿಂದೆ ಜೀವನ ನಿರ್ವಹಣೆಗೆ 20 ರೂಪಾಯಿ ಸಾಕು ಇದರಿಂದ 2100 ಕ್ಯಾಲೊರಿಯ ಆಹಾರವನ್ನು ಸೇವಿಸಲು ಆತ ಅರ್ಹ ಎಂಬ ಅಸಂಬದ್ಧ ವರದಿ ಸಲ್ಲಿಸಿದ್ದ ಆಯೋಗಕ್ಕೆ ಸುಪ್ರೀಂ ಕೋರ್ಟ್ ಕಪಾಳಮೋಕ್ಷ ಮಾಡಿದ ನಂತರ ಭಾರತದ ಬಡವನ ಪುಣ್ಯ ಎಂಬಂತೆ 32 ರೂಪಾಯಿಗಳ ಅಂಕಿ-ಅಂಶ ನೀಡಿದೆ. ಇದು ನಮ್ಮ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ.   
 
ಯೋಜನಾ ಆಯೋಗದ ಅಧಿಕಾರಿಗಳು ಬಡಜನರ ಬಾಳನ್ನು ಹಸನು ಮಾಡುವ, ಅವರ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸುವ ಕ್ರಿಯಾತ್ಮಕ ಯೋಜನೆಗಳನ್ನು ಜಾರಿಗೆ ತರುವತ್ತ ಗಮನಹರಿಸುವ ಬದಲು ಅವರ ಜೀವನವನ್ನು ಇನ್ನಷ್ಟು ದುರ್ಬರಗೊಳಿಸಲು ಹೊರಟಿರುವುದು ವಿಪರ್ಯಾಸ.       

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.