ಕ್ರಿಕೆಟ್ ಇಂದು ಭಾರತದಲ್ಲಿ ಬಹುಶಃ ಸಿನಿಮಾಗಿಂತಲೂ ಜನಪ್ರಿಯವೆಂದರೆ ತಪ್ಪಾಗಲಾರದು.
ಮಕ್ಕಳಿಂದ ವೃದ್ಧರವರೆಗೂ ಇದರ ಬಗ್ಗೆ ಆಸಕ್ತಿ. ಕಚೇರಿಗಳಲ್ಲಿ, ಹೋಟೆಲ್‌ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಸಾಧಾರಣವಾಗಿ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಇದರ ಬಗ್ಗೆ ಚರ್ಚೆ, ಟೀಕೆ ಆಗುತ್ತಿರುವುದು ಸಾಮಾನ್ಯ ದೃಶ್ಯ.
ಪ್ರಮುಖ ಪಂದ್ಯಗಳೇನಾದರೂ ನಡೆಯುವ ದಿನಗಳಲ್ಲಿ ಬಹಳಷ್ಟು ಕಚೇರಿಗಳಲ್ಲಿ ಕೆಲಸಗಳು ಅಷ್ಟಕಷ್ಟೆ. ಅದರಲ್ಲೂ ಭಾರತ - ಪಾಕಿಸ್ತಾನ ಪಂದ್ಯವೇನಾದರೂ ಇದ್ದರೆ, ಅಂದು ಅನೇಕರು ತಮ್ಮ ಕೆಲಸಗಳನ್ನು ಮುಂದೂಡುತ್ತಾರೆ. ಅನೇಕರು ರಜೆ ಹಾಕಿ ಟಿ.ವಿ.ಗಳ ಮುಂದೆ ಕೂರುತ್ತಾರೆ.
ಕೋಟ್ಯಂತರ ಜನರನ್ನು ರಮಿಸುವ, ಕುತೂಹಲ ಕೆರಳಿಸುವ, ಮನರಂಜನೆ ನೀಡುವ, ಈ ಆಟದಲ್ಲಿ ಕಳ್ಳಾಟ ಹೊಕ್ಕಿರುವುದು ಆಘಾತ ತಂದಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿ.ಸಿ.ಸಿ.ಐ. ಇಂತಹ ಸಂಸ್ಥೆಯ `ತಲೆ' ಶ್ರೀನಿವಾಸನ್. ಇವರ ಅಳಿಯ ಕಳ್ಳಾಟದಲ್ಲಿ ಪ್ರಮುಖ ಪಾತ್ರವಹಿಸಿ ಬಂಧನವಾಗಿದ್ದು, ಇದರಲ್ಲಿ ತನ್ನ ಪಾತ್ರವೇನೂ ಇಲ್ಲವೆಂದು ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡದೆ ನಾಟಕವಾಡಿದ್ದು ನಿಜಕ್ಕೂ ಅಸಹ್ಯವೆನಿಸಿತು. ಶ್ರೀಶಾಂತನಿಂದ ಶ್ರೀನಿವಾಸನ್‌ರವರೆಗೂ ಈ ನಾಟಕ ನಡೆದಿದೆ.
ಇನ್ನು ಕ್ರಿಕೆಟ್ ಬಗ್ಗೆ ಬಹಳಷ್ಟು ಮಾತನಾಡುವ ದಿಗ್ಗಜರಾದ ಗಾವಸ್ಕರ್, ರವಿಶಾಸ್ತ್ರಿ, ಸಂಜಯ್ ಮಾಂಜ್ರೇಕರ್ ಇದರ ಬಗ್ಗೆ ತುಟಿಬಿಚ್ಚದಿರುವುದು ಆಶ್ಚರ್ಯವಾಗಿದೆ. ಇಷ್ಟು ರಾದ್ಧಾಂತವಾಗುತ್ತಿದ್ದರೂ ಭಾರತ ತಂಡದ ನಾಯಕ ದೋನಿ ಮೌನವಹಿಸಿರುವುದು ಎಲ್ಲರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಒಟ್ಟಿನಲ್ಲಿ ಐಪಿಎಲ್‌ನಿಂದ ಕ್ರಿಕೆಟಿಗರು ಶ್ರೀಮಂತರಾದರು. ಕ್ರಿಕೆಟ್ ಬಡವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.