ADVERTISEMENT

ಬುಡಕಟ್ಟು ಜನರ ಹಿತ ಹೇಗೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 26 ಡಿಸೆಂಬರ್ 2012, 19:59 IST
Last Updated 26 ಡಿಸೆಂಬರ್ 2012, 19:59 IST

ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುವ ಹೇಯ ಆಚರಣೆಯಾದ ಮಡೆ ಮಡೆ ಸ್ನಾನವನ್ನು ವಿರೋಧಿಸಿ ಮೆರವಣಿಗೆ ಜಾಥಾಗಳನ್ನು ನಡೆಸುವುದನ್ನು ವಿರೋಧಿಸುತ್ತಿರುವ ಭಾಸ್ಕರ ಬೆಂಡೊಡಿಯವರ ಹೇಳಿಕೆ ಬಗ್ಗೆ ವಿಷಾದವೆನಿಸುತ್ತಿದೆ. ಬುಡಕಟ್ಟು ಜನಾಂಗವಾದ ಮಲೆಕುಡಿಯರು ಹಾಗೂ ಅವರ ಮುಗ್ಧ ಜೀವನ ಶೈಲಿಯನ್ನು  ಶಿವರಾಮ ಕಾರಂತರು `ಕುಡಿಯರ ಕೂಸು' ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ. ಇಂತ ಮಲೆಕುಡಿಯ ಸಮುದಾಯದ ಮಕ್ಕಳು ಎಷ್ಟು ಜನ ಓದಿ ಸರ್ಕಾರಿ ನೌಕರಿಯಲ್ಲಿದ್ದಾರೆ? ಎಷ್ಟು ಜನ ಐ.ಎ.ಎಸ್., ಐ.ಪಿ.ಎಸ್., ಕೆ.ಎ.ಎಸ್., ಐ.ಎಫ್.ಎಸ್. ಎಂಜಿನಿಯರ್, ಡಾಕ್ಟರ್ಸ್‌ ಆಗಿದ್ದಾರೆ.

ಮಲೆಕುಡಿಯ ಬುಡಕಟ್ಟು ಜನರ ಮನೆಗಳು ಯಾವ ಸ್ಥಿತಿಯಲ್ಲಿವೆ? ಎಷ್ಟು ಮನೆಗಳಿಗೆ ಗ್ಯಾಸ್ ಸಂಪರ್ಕವಿದೆ? ಎಷ್ಟು ಮನೆಗೆ ವಿದ್ಯುತ್ ಅಥವಾ ಸೌರವಿದ್ಯುತ್ ಸಂಪರ್ಕವಿದೆ? ಅದೆಲ್ಲಕ್ಕಿಂತ ಮಲೆಕುಡಿಯ ಬುಡಕಟ್ಟು ಜನರ ಎಲ್ಲರ ಮನೆಯಲ್ಲು, ಶೌಚಾಲಯ, ಸ್ನಾನದ ಗೃಹಗಳಿವೆಯೆ? ಭಾಸ್ಕರ ಬೆಂಡೊಡಿಯವರೆ ನೀವು ನಿಮ್ಮ ಜನರ ಹಿತ ಕಾಯುವವರಾದರೆ ಇದರತ್ತ ಕೂಡಲೇ ಗಮನಹರಿಸಿ.

ಅತಿ ಪುರಾತನ ಬುಡಕಟ್ಟು ಜನಾಂಗವಾದ ಕೊರಗ ಸಮುದಾಯದ 42 ಜನ ಮಕ್ಕಳು ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉಚಿತವಾಗಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಮತ್ತು ಡಾ. ಬಾಬು ಎಂಬುವವರು ಪಿ.ಎಚ್.ಡಿ. ಪಡೆದಿದ್ದಾರೆ. ಇನ್ನು ಹಲವರು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಇದೆಲ್ಲವೂ ಕೊರಗ ಜನಾಂಗದ ಯುವ ಸಂಘಗಳಿಂದ ಸಾಧ್ಯವಾಗಿದೆ. ಕುಂದಾಪುರದ ಗಣೇಶ ವಿ. ಕೊರಗ, ಮರವಂತೆಯ ಶೇಖರ್ ಕೊರಗ, ಬೈಂದೂರಿನ ಲಕ್ಷ್ಮಣ ಕೆ. ಕೊರಗ, ಹಾಗೂ ಬಾರ್ಕುರಿನ ಗಣೇಶ್ ಮತ್ತು ಬಾರ್ಕುರಿನ ಹುಬಾಷಿಕ ಕೊರಗರ ಯುವ ಕಲಾವೇದಿಕೆ ಎಲ್ಲ ಸದಸ್ಯರು ಮದ್ಯಪಾನ ನಿಷೇಧಿಸಿದ್ದಾರೆ. ಇದೆಲ್ಲ ಆ ಜನಾಂಗದ ಹಿತರಕ್ಷಣೆಯ ಹೊಣೆ ಹೊತ್ತ ಕೊರಗ ಯುವ ನಾಯಕರ ಶ್ರಮ.

ಭಾಸ್ಕರ ಬೆಂಡೊಡಿಯವರೆ, ನಿಮ್ಮ ಹೋರಾಟ ನಿಮ್ಮ ಜನಾಂಗದ ಉದ್ಧಾರಕ್ಕೆ ಸೀಮಿತವಾದರೆ, ನೀವು ಬದಲಾವಣೆಯ ಹರಿಕಾರರಾಗುತ್ತೀರಿ. ನೀವೊಮ್ಮೆ ಕುಂದಾಪುರ ಗಣೇಶ ಕೊರಗರನ್ನು ಭೇಟಿ ಮಾಡಿ, ನಿಮ್ಮ ಜನಾಂಗದ ಮಕ್ಕಳನ್ನು ವೈಚಾರಿಕ ಪ್ರಜ್ಞಾವಂತರನ್ನಾಗಿ ಮಾಡಿರೆಂದು ಆಶಿಸುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.