ADVERTISEMENT

ಮತ್ತೊಂದು ಸಂಸ್ಕೃತ ಕಾಲೇಜು ಬೇಕೆ?

ಚನ್ನವೀರ ಸ್ವಾಮಿ, ಬೆಂಗಳೂರು
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

ರಾಜ್ಯದಲ್ಲಿ 3 ಸರ್ಕಾರಿ ಸಂಸ್ಕೃತ ಕಾಲೇಜುಗಳು ಮತ್ತು 10 ಖಾಸಗಿ ಅನುದಾನಿತ ಸಂಸ್ಕೃತ ಕಾಲೇಜುಗಳು ಇವೆ. ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು 2012-13 ಸಾಲಿನಲ್ಲಿ 18 ಸಂಸ್ಕೃತ ಕಾಲೇಜುಗಳನ್ನು ಪ್ರಾರಂಭಿಸಲು ಖಾಸಗಿಯವರಿಗೆ ಅನುಮತಿ ನೀಡುವುದರ ಜೊತೆಗೆ ಮಾನ್ಯತೆಯನ್ನು ನೀಡಿದೆ. ಇದೊಂದು ಐತಿಹಾಸಿಕ ದಾಖಲೆ.

ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿಗೆ 150 ವರ್ಷಗಳ ಇತಿಹಾಸವಿದೆ, ರಾಜಾಶ್ರಯದಿಂದ ಬೆಳೆದುಬಂದ ಈ ಕಾಲೇಜು ಒಂದು ಕಾಲದಲ್ಲಿ “ಮಿನಿ ವಿಶ್ವವಿದ್ಯಾಲಯ”ವಾಗಿತ್ತು. ವೇದಾಗಮಶಾಸ್ತ್ರಗಳ ತಳಸ್ಪರ್ಶಿ ಅಧ್ಯಯನದ ಜೊತೆಗೆ ಆಯುರ್ವೇದ, ಸಂಗೀತ ಇತ್ಯಾದಿ ಲಲಿತ ಕಲೆಗಳ ಉಗಮ ಸ್ಥಾನವಾಗಿತ್ತು.

ಬಹುಮುಖ ಪ್ರತಿಭೆಯ ಸಂಸ್ಕೃತ ವಿದ್ವಾಂಸರನ್ನು ಘನಪಾಠಿಗಳನ್ನು ಮತ್ತು ಆಗಮಿಕರನ್ನು ರಾಷ್ಟ್ರಕ್ಕೆ ನೀಡಿದ ಕೀರ್ತಿ ಈ ಪ್ರಾಚೀನ ವಿದ್ಯಾಕೇಂದ್ರಕ್ಕೆ ಸಲ್ಲುತ್ತದೆ. ಇತ್ತೀಚೆಗೆ ಪ್ರಾಚೀನ ಪರಂಪರೆಯ ಈ ಮಹಾಪಾಠಶಾಲೆ ಸರ್ಕಾರದ ಅನಾದರದಿಂದ ತನ್ನತನವನ್ನು ಕಳೆದುಕೊಳ್ಳುತ್ತಿದೆ.

25 ವರ್ಷಗಳಿಂದ ಪ್ರಾಂಶುಪಾಲರ ಹುದ್ದೆ ಖಾಲಿ ಇರುವುದರ ಜೊತೆಗೆ ವೇದ, ಶಾಸ್ತ್ರ ವಿಭಾಗಗಳ ಪ್ರಾಧ್ಯಾಪಕರುಗಳ ಹುದ್ದೆಗಳೂ ಸಹ ಭರ್ತಿಯಾಗದೇ ಖಾಲಿ ಬಿದ್ದಿವೆ. ಉಪಾಧ್ಯಾಯರು ಇಲ್ಲದಿದ್ದರೆ ವಿದ್ಯಾರ್ಥಿಗಳ ಸೇರ್ಪಡೆ ಸಾಧ್ಯವೆ? ಮಹಾರಾಜ ಕಾಲೇಜಿನಲ್ಲಿ ಉಚಿತ ವಸತಿ, ಭೋಜನ ಹಾಗೂ ವಿದ್ಯಾರ್ಥಿವೇತನದ ಸೌಲಭ್ಯವಿದ್ದರೂ ವಿದ್ಯಾರ್ಥಿಗಳ ಅಭಾವ ಎದ್ದು ಕಾಣುತ್ತಿದೆ.

ಸಂಸ್ಕೃತ ಪಾಠಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಕಳೆದರೂ ಪ್ರಾಂಶುಪಾಲರ ಹುದ್ದೆ ಹಾಗೂ ಇತರೆ ಹುದ್ದೆಗಳನ್ನು ತುಂಬದೇ ಹೊಸ ಕಾಲೇಜುಗಳನ್ನು ಪ್ರಾರಂಭಿಸಲು ಹೊರಟಿರುವುದು ಎಷ್ಟು ಸಮಂಜಸ.

ADVERTISEMENT

ಅನುದಾನಸಂಹಿತೆ ನಿಯಮ 10 ಮತ್ತು 11, 12ನ್ನು ಪಾಲಿಸದೇ ಕೇವಲ ಅರ್ಧ ಕಿ.ಮೀ. ದೂರದಲ್ಲಿ ಖಾಸಗಿ ಸಂಸ್ಥೆಗೆ ಕಾಲೇಜು ಪ್ರಾರಂಭಿಸಲು ಅನುಮತಿ ನೀಡಿರುವುದು ನಿಯಮಬಾಹಿರ, ತಜ್ಞರ ಸಮಿತಿ ಯಾವುದನ್ನೂ ಪರಿಗಣಿಸದೇ ಶಿಫಾರಸ್ಸು ಮಾಡಿರುವುದು ಏಕಪಕ್ಷೀಯ ನಿರ್ಧಾರವಾಗುತ್ತದೆ, ವೀರಶೈವರ ವೇದಾಂತ ಬೋಧನೆ ಈ ಕಾಲೇಜಿನಲ್ಲೂ ಇದೆ ಹೊಸ ಕಾಲೇಜಿಗೂ ಈ ಭಾಗವನ್ನೇ ಐಚ್ಛಿಕ ವಿಷಯವಾಗಿ ಬೋಧಿಸಲು ಅನುಮತಿ ನೀಡಲಾಗಿದೆ. ಆರೋಗ್ಯಕರವಲ್ಲದ ಈ ಸ್ಪರ್ಧೆ ವಿದ್ಯಾರ್ಥಿಗಳಿಲ್ಲದೆ ಮುಂದೇನಾಗಬಹುದು ಎಂಬುದನ್ನು ಯಾರುಬೇಕಾದರೂ ಊಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.