ADVERTISEMENT

ಮನುಷ್ಯರಾಗಿ ಬದುಕಿ ಎಂದು ಹೇಳಿದ್ದೇ ತಪ್ಪೇ?

ಡಾ.ಸಿದ್ದರಾಜು, ಕೊತ್ತತ್ತಿ
Published 22 ಆಗಸ್ಟ್ 2013, 20:07 IST
Last Updated 22 ಆಗಸ್ಟ್ 2013, 20:07 IST

ವಿಚಾರವಾದಿ ನರೇಂದ್ರ ದಾಭೋಲಕರ ಅವರನ್ನು ಪುಣೆಯಲ್ಲಿ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ. ದೇಶದಲ್ಲಿ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಬಿ.ಆರ್.ಅಂಬೇಡ್ಕರ್ ಅವರ ತವರು ನೆಲದಲ್ಲಿ ಈಗ ಈ ದುರ್ಘಟನೆ ನಡೆದಿರುವುದು ವಿಪರ್ಯಾಸ.

ಇಷ್ಟಕ್ಕೂ ನರೇಂದ್ರರು ಮಾಡಿದ ತಪ್ಪಾದರೂ ಏನು? ಮೂಲತಃ ವೈದ್ಯರಾಗಿದ್ದ ಅವರು 30 ವರ್ಷಗಳಿಗಿಂತಲೂ ಹಿಂದೆಯೇ ಸಮಾಜಸೇವೆಯತ್ತ ಮುಖ ಮಾಡಿ 1989ರಲ್ಲಿ `ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ'ಯನ್ನು ಆರಂಭಿಸಿ ಮಾಟ, ಮಂತ್ರ, ಡೋಂಗಿ ದೇವಮಾನವರ ವಿರುದ್ಧ ಜನಾಂದೋಲನ ಆರಂಭಿಸಿ, ಅದರಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡವರು. 3000ಕ್ಕೂ ಹೆಚ್ಚು ಸಾರ್ವಜನಿಕ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಮೂಢನಂಬಿಕೆಗಳ ವಿರುದ್ಧ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

ಪುಣೆಯಲ್ಲಿ ನಡೆದ ವಿಚಾರವಾದಿ ಸಮ್ಮೇಳನವೊಂದರಲ್ಲಿ ಭಾಗವಹಿಸಿದ್ದಾಗ ಅವರಲ್ಲಿ ಕಂಡದ್ದು ಒಬ್ಬ ನೈಜ ವಿಚಾರವಾದಿಯ ಅಪ್ರತಿಮ ಸರಳತೆ ಹಾಗೂ ವಿನಯಶೀಲತೆಯನ್ನು. ಅಂದು ನರೇಂದ್ರರು ಹೇಳಿದ್ದು- `ಜನರ ಅಜ್ಞಾನವನ್ನು ಬಂಡವಾಳವಾಗಿಸಿಕೊಂಡು, ಅವರನ್ನು ಶೋಷಿಸುವ ರಕ್ಕಸರಾಗಬೇಡಿ, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಮನುಷ್ಯರಾಗಿ ಬದುಕಿ'.

ಇದು ನಮ್ಮ ದೇಶದ ಸಂವಿಧಾನದ ಆಶಯ ಕೂಡ. ಹಾಗಾದರೆ ಸಂವಿಧಾನದ ಆಶಯಗಳ ಅನುಷ್ಠಾನಕ್ಕಾಗಿ ದನಿ ಎತ್ತುವುದೂ ಅಪರಾಧವೇ? ವೈಚಾರಿಕ ಚಳವಳಿಯಲ್ಲಿ ತೊಡಗಿಸಿಕೊಂಡವರಿಗೆ ಈಗಲಾದರೂ ಸೂಕ್ತ ರಕ್ಷಣೆ ದೊರೆಯಲಿ.
-ಡಾ.ಸಿದ್ದರಾಜು, ಕೊತ್ತತ್ತಿ, ಮಂಡ್ಯ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.