ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಅಂಗವಾಗಿ ಇತ್ತೀಚೆಗೆ ಬಾಂಗ್ಲಾ ದೇಶದ ಗ್ರಾಮೀಣ ಬ್ಯಾಂಕ್ ಸಂಸ್ಥಾಪಕ, ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊ. ಮೊಹಮ್ಮದ್ ಯೂನಸ್ ‘ಪ್ರಪಂಚದ ಪುನರ್ ನಿರ್ಮಾಣಕ್ಕೆ ಅರ್ಥಶಾಸ್ತ್ರದ ಮರುವಿನ್ಯಾಸ’ ಎಂಬ ವಿಷಯವಾಗಿ ಮೌಲಿಕ ಉಪನ್ಯಾಸ ನೀಡಿದರು. ಅದು ಕೇವಲ ಪುಸ್ತಕಗಳ ಓದಿನ ಜ್ಞಾನವಾಗಿರದೆ, ಪ್ರಾಯೋಗಿಕ ನೆಲೆಯ ಅನುಭವದ ಅರಿವಿನ ಸ್ಫೋಟದಂತೆ ಇತ್ತು.
ಬಾಂಗ್ಲಾದ ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವಲ್ಲಿ ಅವರು ಹಳ್ಳಿಗಳನ್ನೇ ತಮ್ಮ ಪ್ರಯೋಗಶಾಲೆ ಮಾಡಿಕೊಂಡದ್ದು, ಗ್ರಾಮೀಣ ಬ್ಯಾಂಕುಗಳನ್ನು ಸ್ಥಾಪಿಸಿ ಹೂಡಿಕೆದಾರರಲ್ಲಿ ಶೇ 99ರಷ್ಟು ಮಹಿಳೆಯರು ಒಳಗೊಳ್ಳುವಂತೆ ಮಾಡಿ, ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಸೌಲಭ್ಯ ತಲುಪಿಸುವ ಹೊಸ ವ್ಯವಸ್ಥೆಯ ಮೂಲಕ ಗ್ರಾಮೀಣ ಬಡತನ ನಿರ್ಮೂಲನೆಗೆ ಶ್ರಮಿಸಿದ ‘ಆರ್ಥಿಕ ಕ್ರಾಂತಿ’ಯನ್ನು ವಿವರಿಸಿದರು.
ವಿದ್ಯಾವಂತ ಯುವ ಸಮುದಾಯ ಸರ್ಕಾರಿ ಉದ್ಯೋಗಕ್ಕೆ ಕಾಯದೆ ವ್ಯಾಪಾರ, ಉದ್ದಿಮೆಗಳ ಮೂಲಕ ಸ್ವಯಂ ಉದ್ಯೋಗ ಸೃಷ್ಟಿಸಿಕೊಂಡು ಉದ್ಯೋಗಗಳ ಸೃಷ್ಟಿಕರ್ತರಾಗಬೇಕೆಂಬ ಅವರ ಸಲಹೆ ಮತ್ತು ಆ ನಿಟ್ಟಿನ ಅವರ ಪ್ರಯೋಗಶೀಲತೆ ಸ್ವಾಗತಾರ್ಹವಾದುದು.
ಅಪೌಷ್ಟಿಕತೆಯ ಕಾರಣದಿಂದ ಕಾಣಿಸಿಕೊಳ್ಳುವ ಇರುಳುಗಣ್ಣಿನಂಥ ಆರೋಗ್ಯ ಸಮಸ್ಯೆಯನ್ನು ವಿಟಮಿನ್ ಮಾತ್ರೆಗಳ ಬದಲಾಗಿ, ಆ ವಿಟಮಿನ್ ಅಂಶವಿರುವ ತರಕಾರಿಗಳನ್ನು ಬೆಳೆದು ತಿನ್ನುವುದರಿಂದ ಹೇಗೆ ನಿವಾರಿಸಿಕೊಳ್ಳಬಹುದೆಂಬ ಅನುಭವ ಹಂಚಿಕೊಂಡದ್ದು ಕುತೂಹಲಕಾರಿಯಾಗಿತ್ತು.
ಹೀಗೆ ಪ್ರಾಯೋಗಿಕ ಹಿನ್ನೆಲೆಯಲ್ಲಿ ಮಂಡಿಸಿದ ಅವರ ದೇಶಿ ನೆಲೆಯ ಆನ್ವಯಿಕ ಅರ್ಥಶಾಸ್ತ್ರದ ಹೊಸ ಚಿಂತನೆಗಳು ಅರ್ಥಶಾಸ್ತ್ರದ ಮರುವ್ಯಾಖ್ಯಾನಕ್ಕೆ ಇಂಬುಕೊಡುವಂತೆ ಇದ್ದವು. ಪ್ರಪಂಚದ ಪುನರ್ ನಿರ್ಮಾಣಕ್ಕೆ ಅರ್ಥಶಾಸ್ತ್ರದ ಹೊಸ ಸಾಧ್ಯತೆಗಳು ಹೇಗಿರಬೇಕೆಂಬುದನ್ನು ಸಾದರಪಡಿಸುತ್ತಿದ್ದವು ಹಾಗೂ ರಾಷ್ಟ್ರವೊಂದನ್ನು ತಳಮಟ್ಟದಿಂದ ಹೇಗೆ ಕಟ್ಟಬೇಕೆಂಬ ಆಶಯಕ್ಕೆ ಪೂರಕವಾಗಿಯೂ ಇದ್ದವು. ಹಾಗಾಗಿ ವಿಶ್ಶವಿದ್ಯಾಲಯದ ಶತಮಾನೋತ್ಸವ ಆಚರಣೆಯ ಈ ಮೊದಲ ಉಪನ್ಯಾಸ ಹೊಸ ಚಿಂತನೆಗೆ ಉತ್ತಮ ಮುನ್ನುಡಿ ಬರೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.