ADVERTISEMENT

ಯಾವ ಸೀಮೆ ಧರ್ಮವಿದು?

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಕುಂಜಾರುಗಿರಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ಬಾಹ್ಮಣರಲ್ಲವೆಂಬ ಕಾರಣವನ್ನು ಮುಂದೆ ಮಾಡಿ,  ಪಂಕ್ತಿಯಲ್ಲಿ ಊಟಕ್ಕೆ ಕುಳಿತವರನ್ನು ಮೇಲೆಬ್ಬಿಸಿ ಕಳುಹಿಸಿದ ಪ್ರಸಂಗವು ಅತ್ಯಂತ ಹೇಯ ಘಟನೆಯಾಗಿದೆ. ದೇವಸ್ಥಾನದವರು ಹೇಳುವಂತೆ ಅದು ಹರಕೆಯ ಊಟದ ಕಕ್ಷೆಯೇ ಆಗಿದ್ದುದು ನಿಜವಾಗಿದ್ದರೆ, ಆ ನಾಲ್ಕು ಜನರಿಗೆ  `ನೀವು ಮತ್ತೊಬ್ಬರ ಹರಕೆಯ ಊಟಕ್ಕಾಗಿ ಬಂದವರಲ್ಲದಿದ್ದರೆ, ದೇವಸ್ಥಾನದ ಸಹ ಭೋಜನದ ಕಕ್ಷೆಯಲ್ಲೇ ಕುಳಿತುಕೊಳ್ಳಿ, ಇಲ್ಲಿ ಬೇಡ~ ಎಂದು  ಹೇಳುವ ಸೌಜನ್ಯ ದೇವಸ್ಥಾನದವರಿಗೆ ಇರಬೇಕಾಗಿತ್ತು. 

ಅವರು ಹಾಗೆ ವರ್ತಿಸದೆ, ಅರಿಯದೆ ಹರಕೆ ಊಟದ ಪಂಕ್ತಿಯಲ್ಲಿ ಕುಳಿತವರನ್ನು ಜಾತಿ, ಸಂಪ್ರದಾಯ ಅದು ಇದು ಎಂದು ಏನೇನೋ ಹೇಳಿ, ಅವರ ಮತ್ತು ಇನ್ನೂ ಹಲವರ ಮನಸ್ಸನ್ನು ನೋಯಿಸಿದ ಕ್ರಮವನ್ನು ಖಂಡಿಸಲೇಬೇಕು.

ದೇವಸ್ಥಾನದ ಒಂದು ಊಟಕ್ಕೋಸ್ಕರ ತಾವೂ ಬ್ರಾಹ್ಮಣರೇ ಹೌದು ಎಂದು ಸಮರ್ಥಿಸಿಕೊಳ್ಳುವ ಚಿಂತಾಜನಕ ಸ್ಥಿತಿಯು ಯಾರಿಗೂ ಬರುವುದು ಬೇಡ. ಹರಕೆ ಊಟದ ಕಕ್ಷೆಗೆ ಆಮಂತ್ರಿತರಲ್ಲದವರು ಪ್ರವೇಶಿಸದಂತೆ ಮೊದಲೇ ತಡೆಯದೆ, ಗೊತ್ತಿಲ್ಲದೆ ಬಂದು ಕುಳಿತವರನ್ನು ಎಬ್ಬಿಸಿ ಕಳಿಸುವುದು ಯಾವ ಸೀಮೆಯ ಬ್ರಾಹ್ಮಣ ಧರ್ಮವೋ ನನಗೂ ಗೊತ್ತಿಲ್ಲ.

ADVERTISEMENT

ಹರಕೆಯವರಾದರೂ `ಇವರೂ ನಮ್ಮಡನೆ ಊಟ ಮಾಡಲಿ, ಇರಲಿ ಬಿಡಿ~ ಎಂದು ಹೇಳಿ ಅವರನ್ನು ಅಲ್ಲಿಯೇ ಉಳಿಸಿಕೊಂಡಿದ್ದರೆ ಇನ್ನಷ್ಟು ಪುಣ್ಯ ಲಭಿಸುತ್ತಿತ್ತೋ ಏನೋ. ಅದೂ ಆಗಲಿಲ್ಲ. ಛೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.