1956ಕ್ಕಿಂತ ಮೊದಲು, ಅಂದರೆ ಬಹುಮನಿ, ವಿಜಯನಗರ, ಮರಾಠ ಮತ್ತು ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ರಾಜ್ಯದ ಈಗಿನ ಭೂಪ್ರದೇಶವು ಹತ್ತು ಹಲವು ಸಂಸ್ಥಾನಗಳ ಹಿಡಿತದಲ್ಲಿ ಹಂಚಿ ಹೋಗಿತ್ತು.
ಕರ್ನಾಟಕ ಏಕೀಕರಣ ಚಳವಳಿ ಮೊದಲು ಬೀಜಾಂಕುರಗೊಂಡಿದ್ದು ಮುಂಬೈ ಕರ್ನಾಟಕ ಭಾಗದಲ್ಲಿ. ಪೂರ್ಣ ಪ್ರಮಾಣದಲ್ಲಿ ಆಗದಿದ್ದರೂ ಬಹುಪಾಲು ಕನ್ನಡಿಗರ ಏಕೀಕೃತ ಕರ್ನಾಟಕ ರೂಪುಗೊಳ್ಳಲು ಪ್ರಮುಖ ಪಾತ್ರ ನಿರ್ವಹಿಸಿದ್ದೇ ಈ ಮುಂಬೈ -ಕರ್ನಾಟಕ. ಈಗ ಇದೇ ನೆಲದಿಂದಲೇ ಉತ್ತರ ಕರ್ನಾಟಕ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದೆ.
ರಾಜಧಾನಿ ರಾಜ್ಯದ ಮಧ್ಯಭಾಗದಲ್ಲಿ ಇರಬೇಕು ಎಂದು ಫಜಲ್ ಅಲಿ ನೇತೃತ್ವದ ರಾಜ್ಯಗಳ ಪುನರ್ವಿಂಗಡಣಾ ಆಯೋಗ ವರದಿಯಲ್ಲಿ ಶಿಫಾರಸು ಮಾಡಿದೆ. ಏಕೀಕರಣ ಚಳವಳಿಗಾರರೆಲ್ಲರ ಕನಸು ಮತ್ತು ನಿರ್ಧಾರ ಕೂಡ ಇದೇ ಆಗಿತ್ತು. ಏಕೀಕೃತ ಕರ್ನಾಟಕದ ರಾಜಧಾನಿ ದಾವಣಗೆರೆ ಆಗಬೇಕು ಎನ್ನುವ ಕಾರಣಕ್ಕಾಗಿಯೇ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಮೊದಲನೆಯ ಅಧಿವೇಶನ ಕೆ.ಆರ್.ಕಾರಂತರ ಅಧ್ಯಕ್ಷತೆಯಲ್ಲಿ 1953ರ ಮೇ 28ರಂದು ದಾವಣಗೆರೆಯಲ್ಲಿ ನಡೆಯಿತು.
ಆದರೆ ಪ್ರಸ್ತುತ ರಾಜಧಾನಿ ರಾಜ್ಯದ ದಕ್ಷಿಣದ ಮೂಲೆಯಲ್ಲಿ ಇರುವುದರಿಂದ ಉತ್ತರ ಕರ್ನಾಟಕದವರ ಯಾವ ಸಮಸ್ಯೆಗಳಿಗೂ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ಹಾಗೂ ನೆರವು ಸಿಗುತ್ತಿಲ್ಲ. ಈ ಭಾಗದ ಜನಸಾಮಾನ್ಯರು ಇನ್ನೂ ಬೆಂಗಳೂರನ್ನು ನೋಡಲೂ ಆಗಿಲ್ಲ. ಅಧಿಕಾರದ ಕೇಂದ್ರ ಸ್ಥಾನ ತಲುಪಿಲ್ಲದ ಕಾರಣ ಅವರ ಸಮಸ್ಯೆಗಳು ಅವರಲ್ಲಿಯೇ ಉಳಿದಿವೆ. ಈ ಭಾಗದ ಜನ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅಥವಾ ಚರ್ಚಿಸಲು ಮುಖ್ಯಮಂತ್ರಿಯನ್ನು ಭೇಟಿಯಾಗುವುದು ಕನಸಿನ ಮಾತೇ ಆಗಿದೆ.
ಈಗಂತೂ ಬೆಂಗಳೂರಿಗೆ ಎಲ್ಲವೂ ಭಾರವಾಗಿದೆ. ಈ ನಗರಕ್ಕೆ ಆಗಿರುವ ಒತ್ತಡ ತಪ್ಪಿಸಬೇಕಾಗಿದೆ. ಹೀಗಾಗಿ ಎಲ್ಲ ಅಪಸ್ವರಗಳನ್ನೂ ತಪ್ಪಿಸಲು ರಾಜ್ಯದ ಕೇಂದ್ರ ಸ್ಥಾನವಾದ ದಾವಣಗೆರೆಗೆ ತುರ್ತಾಗಿ ರಾಜಧಾನಿಯನ್ನು ಸ್ಥಳಾಂತರಿಸುವ ಚಾರಿತ್ರಿಕವಾದ ನಿರ್ಣಯವನ್ನು ಕೈಗೊಳ್ಳಬೇಕಾಗಿದೆ. ಅಂದಾಗ ಮಾತ್ರ ಪ್ರಾದೇಶಿಕ ಅಸಮತೋಲನ ಅಥವಾ ತಾರತಮ್ಯ ದೂರಾಗಿ ಈಗಿರುವ ಕರ್ನಾಟಕ ಏಕೀಕೃತವಾಗಿ ಉಳಿಯಲು ಸಾಧ್ಯ. ಇಲ್ಲದಿದ್ದರೆ ಪ್ರತ್ಯೇಕತೆಯ ಕೂಗು ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.