ರಾಯಚೂರು ಜಿಲ್ಲೆಯಲ್ಲಿ ವಿಷಪೂರಿತ ಚವಳೆಕಾಯಿ ಪಲ್ಯ ಸೇವಿಸಿ ತಂದೆ ಮತ್ತು ಇಬ್ಬರು ಪುತ್ರಿಯರು ಮೃತಪಟ್ಟಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಇಂತಹ ಅಮಾನವೀಯ ಘಟನೆಗೆ ನೇರ ಕಾರಣ ಯಾರು? ಆಳುವ ವರ್ಗದ ಮತ್ತು ಅಧಿಕಾರಶಾಹಿಯ ನೇರ ನಿರ್ಲಕ್ಷ್ಯ ಎನ್ನಲು ಅಡ್ಡಿಯಿಲ್ಲ.
ಕೃಷಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವು ಕ್ಷಮೆಗೆ ಅರ್ಹವಲ್ಲ. ಜನಸಾಮಾನ್ಯರ ಜೊತೆಗೆ ಇವರು ಆಡುವ ಆಟಕ್ಕೆ ಇನ್ನೆಷ್ಟು ಅಮಾಯಕರು ಬಲಿಯಾಗಬೇಕು? ಜಾಗತಿಕ ಮಟ್ಟದಲ್ಲಿ ನಿಷೇಧಿಸಲಾದ
ಎಷ್ಟೋ ರಾಸಾಯನಿಕಗಳು ‘ವಿಶ್ವಗುರು’ ಭಾರತದಲ್ಲಿ ರಾಜಾರೋಷವಾಗಿ
ಬಿಕರಿಯಾಗುತ್ತಿವೆ. ಕೃಷಿಯಲ್ಲಿ ಬಳಸುವ ರಾಸಾಯನಿಕಗಳ ಪರಿಣಾಮದಿಂದ ಪ್ರತಿವರ್ಷ ಜಗತ್ತಿನಲ್ಲಿ 3.55 ಲಕ್ಷ ಜನ ಸಾವಿನ ದವಡೆಗೆ ಸಿಲುಕುತ್ತಿದ್ದಾರೆ.
ಅಂದರೆ, ಪ್ರತಿ ದಿನ ಸರಾಸರಿ ಒಂದು ಸಾವಿರ ಜನರು ಕಳೆ/ ಪೀಡೆನಾಶಕಗಳಿಗೆ
ಬಲಿಯಾಗುತ್ತಿದ್ದಾರೆ. ಇಂತಹ ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ, ಸರ್ಕಾರದ ನೀತಿಗಳು ಕಾರ್ಪೊರೇಟ್ ಪರವಾಗಿ ಇರುವುದು ದುರದೃಷ್ಟಕರ. ರಾಸಾಯನಿಕ ಮುಕ್ತ ಬೇಸಾಯ ಪದ್ಧತಿಯೇ ಇದಕ್ಕೆ ಪರಿಹಾರ.
–ಶಿವಕುಮಾರ್ ಗುಳಘಟ್ಟ, ಮಂಡ್ಯ
ಲೋಕಸಭಾ ಚುನಾವಣೆ– 2024ರ ವೇಳೆ ಬೆಂಗಳೂರಿನ ಮತ ಕ್ಷೇತ್ರದಲ್ಲಿ ಮತ ಕಳವು ನಡೆದಿದೆ. ಇದಕ್ಕೆ ಸ್ಪಷ್ಟ ಪುರಾವೆಗಳಿವೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಆರೋಪ ಪ್ರಜಾಪ್ರಭುತ್ವ ವ್ಯವಸ್ಥೆಗೆ ಎದುರಾಗಿರುವ ಅಗ್ನಿ ಪರೀಕ್ಷೆ. ಇದನ್ನು ಅಲ್ಲಗಳೆಯದ ಚುನಾವಣಾ ಆಯೋಗವು, ರಾಹುಲ್ ಅವರು ಘೋಷಣೆ ಮತ್ತು ಪ್ರತಿಜ್ಞಾ ಪತ್ರಕ್ಕೆ ಸಹಿ ಹಾಕಬೇಕು. ಆರೋಪ ಸುಳ್ಳಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದಿದೆ.
ರಾಹುಲ್ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸುವ ಆರೋಪ ಮಾಡಿದ್ದಾರೆ. ಅದು ಸತ್ಯ ಎಂದು ಪ್ರಮಾಣೀಕರಿಸುವ ಹೊಣೆಗಾರಿಕೆಯೂ ಅವರ ಮೇಲಿದೆ. ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ಚುನಾವಣಾ ಆಯೋಗ ಅಥವಾ ನ್ಯಾಯಾಲಯಕ್ಕೆ ಸಲ್ಲಿಸಿ ಆರೋಪವು ‘ಠುಸ್’ ಆಗದಂತೆ ಎಚ್ಚರವಹಿಸಲಿ.
–ವಿರೇಶ ಬಂಗಾರಶೆಟ್ಟರ, ಕುಷ್ಟಗಿ
ಬೆಂಗಳೂರು–ಬೆಳಗಾವಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಕೊನೆಗೂ ಶುರುವಾಗಲಿದೆ. ಕಲಬುರಗಿಯವರ ಸಂಕಟ ಇಷ್ಟೇ. ಬೆಳಗಾವಿ ವಂದೇ ಭಾರತ್ ರೈಲಿಗೆ ಬೆಂಗಳೂರು ಸಿಟಿ ನಿಲ್ದಾಣದಲ್ಲಿ ಪ್ಲಾಟ್‌ಫಾರಂ ಸರಾಗವಾಗಿ ಲಭಿಸುತ್ತದೆ. ಕಲಬುರಗಿ ವಂದೇ ಭಾರತ್ ರೈಲಿಗೆ ಪ್ಲಾಟ್‌ಫಾರಂ ಲಭ್ಯವಿಲ್ಲ ಎಂಬ ನೆಪವೊಡ್ಡಿ, ಎಸ್‌ಎಂವಿಟಿ ರೈಲು ನಿಲ್ದಾಣಕ್ಕೆ ಒಯ್ಯಲಾಗುತ್ತಿದೆ.
ಬೆಂಗಳೂರಿನ ಪೂರ್ವ ಭಾಗದ ಈ ನಿಲ್ದಾಣ ತಲುಪಲು ಅನನುಕೂಲವೇ ಜಾಸ್ತಿ. ರೈಲು ಸೇವೆ ಆರಂಭಗೊಂಡ 18 ತಿಂಗಳಾದರೂ ಕನಿಷ್ಠ ಬೆಂಗಳೂರು ‘ದಂಡು’ ನಿಲ್ದಾಣದವರೆಗಾದರೂ ಈ ರೈಲನ್ನು ವಿಸ್ತರಿಸುವ ಬಗ್ಗೆ ನೈರುತ್ಯ
ರೈಲ್ವೆಯು ಗಮನಹರಿಸಿಲ್ಲ. ಕಲಬುರಗಿ ವಂದೇ ಭಾರತ್ ರೈಲಿನ ಅಧಿಸೂಚನೆ ಯಲ್ಲಿಯೇ ಇದರ ಉಲ್ಲೇಖವಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಾದರೂ ಈ ಬಗ್ಗೆ ಗಮನಹರಿಸುವರೇ?
–ಮುದ್ಗಲ್ ವೆಂಕಟೇಶ, ಕಲಬುರಗಿ
ಹಬ್ಬಗಳ ಆಚರಣೆಯಿಂದಾಗಿ ಮನೆಗಳಲ್ಲಿ ಸಂತೋಷ, ಸೌಹಾರ್ದ ನೆಲಸುತ್ತಿದ್ದ ಕಾಲವೊಂದಿತ್ತು. ಪ್ರಸ್ತುತ ಹಬ್ಬಗಳು ಆಡಂಬರ ಪ್ರಧಾನವಾಗಿದ್ದು, ಮಹಿಳೆಯರಿಗೆ ಹೊರೆಯಾಗಿವೆ. ತೋರಿಕೆ ಮತ್ತು ಪ್ರಚಾರವು ಮಹಿಳೆಯರನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಮೊದಲೆಲ್ಲ ಹಬ್ಬಗಳಿಗಾಗಿ ಕಾದು ಹೊಸ ಬಟ್ಟೆ ತೊಟ್ಟು ಓಣಿ ಮಂದಿ; ಅಕ್ಕ–ತಂಗಿಯರು, ಅಣ್ಣ–ತಮ್ಮಂದಿರ ಜೊತೆಯಲ್ಲಿ ಆಟವಾಡುತ್ತಿದ್ದ ದಿನಗಳು ಮಾಯವಾಗಿವೆ. ಈಗ ಯಾವಾಗ ಬೇಕೊ ಆವಾಗ ಬಟ್ಟೆ ಖರೀದಿಸಿ
ಬೇಕೆಂದಾಗ ಹಬ್ಬ ಆಚರಿಸುವ ಸ್ಥಿತಿಗೆ ತಲುಪಿದ್ದೇವೆ. ಈಗ ‘ಅನ್‌ಲಿಮಿಟೆಡ್ ಆಫರ್’ ಖರೀದಿ ಕಾಲ. ಅಂತೆಯೇ ಸಮಾಜದಲ್ಲಿ ತಿರಸ್ಕಾರ, ಅಸಹನೆ, ಅಸಹಿಷ್ಣುತೆ, ದ್ವೇಷವೂ ಮನ, ಮನೆಗಳಲ್ಲಿ ‘ಅನ್‌ಲಿಮಿಟೆಡ್’ ಆಗಿಯೇ ಹೊಗೆಯಾಡುತ್ತಿದೆ.
–ರೇಶ್ಮಾ ಗುಳೇದಗುಡ್ಡಾಕರ್, ಕೊಟ್ಟೂರು
ನೋಂದಣಿ ಇಲ್ಲದೇ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಆಧಾರದಲ್ಲಿ ನಡೆಯುತ್ತಿದ್ದ ಆಸ್ತಿ ವ್ಯವಹಾರ ಹಾಗೂ ಜಿಪಿಎ ದುರ್ಬಳಕೆ ತಡೆಗಟ್ಟಲು, ರಾಜ್ಯ ಸರ್ಕಾರ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ಸ್ವಾಗತಾರ್ಹ. ಇನ್ನು ಮುಂದೆ ಜಿಪಿಎ ಆಧಾರಿತ ಆಸ್ತಿ ವರ್ಗಾವಣೆ ವಹಿವಾಟಿಗೂ ನೋಂದಣಿ ಕಡ್ಡಾಯವಾಗಲಿದೆ.
ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ನಕಲಿ ಪವರ್ ಆಫ್ ಅಟಾರ್ನಿ ಬಳಕೆ ಹೆಚ್ಚಾಗಿದೆ. ಹೊಸ ಕಾಯ್ದೆಗಳು, ನಕಲಿ ದಾಖಲೆಗಳೊಂದಿಗೆ ತಂತ್ರಗಾರಿಕೆ ಹಾಗೂ ಮಾಲೀಕತ್ವದ ಬಗ್ಗೆ ಉಂಟಾಗುವ ಗೊಂದಲಗಳಿಗೆ ತಿಲಾಂಜಲಿ ನೀಡಲಿವೆ. ಆದರೆ, ಕಾಯ್ದೆಯ ಪರಿಣಾಮದ ಬಗ್ಗೆ ಗ್ರಾಮೀಣ ಅನಕ್ಷರಸ್ಥರು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಹಾಗಾಗಿ, ಸರ್ಕಾರವು ವ್ಯಾಪಕ ಅಭಿಯಾನ ಕೈಗೊಳ್ಳಬೇಕಿದೆ. ಆಗಷ್ಟೇ ಕಾಯ್ದೆಗಳ ಆಶಯ ಸಾಫಲ್ಯ ಕಾಣಲಿದೆ.
–ವಿಜಯಕುಮಾರ್ ಎಚ್.ಕೆ., ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.