ADVERTISEMENT

ರೈತರ ಗೋಳು ಕೇಳುವವರಿಲ್ಲ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಶೃಂಗೇರಿ, ಕೊಪ್ಪ ಹಾಗೂ ನರಸಿಂಹರಾಜಪುರ ವ್ಯಾಪ್ತಿಯ್ಲ್ಲಲಿ ಅಡಿಕೆ ಬೆಳೆಗೆ ಹಳದಿ ಎಲೆರೋಗ ತೀವ್ರವಾಗಿದ್ದು ನೂರಾರು ರೈತರು ಹತಾಶರಾಗಿದ್ದಾರೆ.

ಈ ರೋಗಕ್ಕೆ ಔಷಧಿ ಕಂಡುಹಿಡಿಯಲಾಗದೆ ವಿಜ್ಞಾನಿಗಳು ಕೈ ಚೆಲ್ಲಿದ ಮೇಲೆ ರೈತರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಡಾ. ಗೋರಖ್ ಸಿಂಗ್ ಸಮಿತಿಯನ್ನು ನೇಮಿಸಿ ಅಧ್ಯಯನ ನಡೆಸಿತು.

ರೈತರಿಗೆ ಪರಿಹಾರ ನೀಡಲು  ಕೇಂದ್ರ ಕೃಷಿ ಸಚಿವಾಲಯ ಸಮಿತಿ ವರದಿಯನ್ನು ಮಂಜೂರಾತಿಗಾಗಿ ಹಣಕಾಸು ಇಲಾಖೆಗೆ ಕಳುಹಿಸಿ ವರ್ಷವೇ ಕಳೆದಿದೆ.

ಆದರೆ ಹಣಕಾಸು ಇಲಾಖೆ ಇದುವರೆಗೂ ಮಂಜೂರಾತಿ ನೀಡಿಲ್ಲ. ಅಡಿಕೆಯನ್ನೇ ಅವಲಂಬಿಸಿ ಬದುಕುತ್ತಿದ್ದ ಇಲ್ಲಿನ ರೈತರು ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಾಲ ಮಾಡಿದ್ದ ರೈತರ ಮೇಲೆ ಕೇಸು ದಾಖಲಿಸಿ ವಸೂಲಾತಿ ಕ್ರಮ ಕೈಗೊಳ್ಳಲಾಗಿದೆ.

ವರದಿಯ ಶೀಘ್ರ ಜಾರಿಗಾಗಿ ರೈತರು ಜ. 2 ರಿಂದ ಶೃಂಗೇರಿಯ ತಾಲ್ಲೂಕು ಕಚೇರಿಯ  ಮುಂಭಾಗದಲ್ಲಿ ಅನಿರ್ದಿಷ್ಟ ಅವಧಿಯ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ವರದಿಯ ಜಾರಿಯ ಮಾತು ಹಾಗಿರಲಿ ಇದುವರೆಗೆ ಯಾವೊಬ್ಬ ಕೇಂದ್ರ ಅಥವಾ ರಾಜ್ಯ ಸರ್ಕಾರದ ಪ್ರತಿನಿಧಿಯೂ ರೈತರ ಬಳಿ ಬಂದು ಅವರ ಕಷ್ಟಗಳನ್ನು ಕೇಳುವ ಪ್ರಯತ್ನ ಮಾಡಿಲ್ಲ.

ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದವರು ಈಗೇನು ಮಾಡುತ್ತಿದ್ದಾರೆ ?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.