ADVERTISEMENT

ವಯೋಮಿತಿ ಒಳಗೆ ಅವಕಾಶ ನೀಡಿ

ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST

ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹನ್ನೆರಡು ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಿಕ್ಷಣ ಇಲಾಖೆಯ ಆಯುಕ್ತರು ಇತ್ತೀಚೆಗೆ `ಪ್ರಜಾವಾಣಿ'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಕಾಲಕಾಲಕ್ಕೆ ಅಗತ್ಯವಿರುವ ಶಿಕ್ಷಕರನ್ನು ತುಂಬದಿರುವ ಕಾರಣದಿಂದ ಇಂದು ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಾಗಿದೆ.

ಸರ್ಕಾರದ ಈ ಧೋರಣೆಯಿಂದ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳಿಗೆ ಹಿನ್ನೆಡೆ. ಮತ್ತೊಂದೆಡೆ ಶಿಕ್ಷಕ ಹುದ್ದೆಯನ್ನು ಚಾತಕ ಪಕ್ಷಗಳಂತೆ ಕಾಯುತ್ತಿರುವ ಲಕ್ಷಾಂತರ ಡಿ.ಎಡ್. ಪದವೀಧರರು.

ಕಳೆದ ಚುನಾವಣೆ ಸಮಯದಲ್ಲಿ ಶಿಕ್ಷಕ ಹುದ್ದೆಗೆ ಅರ್ಜಿ ಕರೆದಿದ್ದು ಅದೀಗ ಕಾರಣಾಂತರಗಳಿಂದ ಕೋಮಾ ಸ್ಥಿತಿ ತಲುಪಿದೆ. ಜನತಾ ಪಕ್ಷ ಸರ್ಕಾರ ಇದ್ದಾಗ ಅಂದಿನ ಶಿಕ್ಷಣ ಸಚಿವ ಎಚ್.ಜಿ. ಗೋವಿಂದೇಗೌಡರು ರಾಜ್ಯದಲ್ಲಿ ಅಗತ್ಯವಿರುವ ಶಿಕ್ಷಕ ಹುದ್ದೆಗಳನ್ನು ತುಂಬಿ ಶಿಕ್ಷಣ ಕ್ರಾಂತಿಯನ್ನೆ ಮಾಡಿದ್ದರು. ಗೋವಿಂದೇಗೌಡರ ಕಾಲದ ಪ್ರತಿ ನೇಮಕದಲ್ಲೂ ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಿ ವಯಸ್ಸಾಗಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಿದ್ದರು.

ಈ ಮಾನವೀಯ ನಿಯಮವನ್ನು ಮುಂದಿನ ಸರ್ಕಾರಗಳು ಗಾಳಿಗೆ ತೂರಿದ ಪರಿಣಾಮ ಇಂದು ಲಕ್ಷಾಂತರ ನಿರುದ್ಯೋಗಿ ಶಿಕ್ಷಕರು ಕೆಲಸ ಸಿಗದೆ ತಮ್ಮ ವಯೋಮಿತಿಯನ್ನು ಮೀರಿ ಕೆಲಸದಿಂದ ವಂಚಿತರಾಗುತ್ತಿದ್ದಾರೆ.

ಕಳೆದ ಹತ್ತು ವರ್ಷಗಳಿಂದಲೂ ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗೆ ನೇಮಕ ನಡೆಯದೇ ಇರುವ ಕಾರಣ, ಇಂದು ಅದೆಷ್ಟೋ ಅಭ್ಯರ್ಥಿಗಳು ಶಿಕ್ಷಕ ಹುದ್ದೆ ದೊರೆಯದೆ ಹತಾಶರಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.