ADVERTISEMENT

ವಿಚಿತ್ರ ಟೈ ಸಂಸ್ಕೃತಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST

ಇತ್ತೀಚೆಗೆ ಅನೇಕ ಅಧಿಕಾರಿಗಳು ರಾಜಕೀಯ ನಾಯಕರು ಟೈ ಕಟ್ಟುವ ವಿಚಿತ್ರ ಸಂಸ್ಕೃತಿ ಬೆಳೆಯುತ್ತಿದೆ. ಕಾನ್ವೆಂಟ್ ಸ್ಕೂಲ್ ಹುಡುಗ ಹುಡುಗಿಯರು ಟೈ ಕಟ್ಟಿಕೊಂಡು ಹೋಗುತ್ತಿದ್ದರು ಈಗಲೂ ಇದೆ.
 
ಒಂದು ಶಾಲೆಗೆ ಹೋದಾಗ ಹುಡುಗರನ್ನು ಕೇಳಿದೆ ಏಕೆ ಟೈ ಕಟ್ಟುತ್ತೀರಿ ಅಂತ ಅವರಿಗೆ ತಿಳಿಯದು ಮಿಸ್ ಹೇಳಿದರು ಎಂದರು ಇನ್ನೊಬ್ಬ ಹುಡುಗ `ಶಿಸ್ತಿಗಾಗಿ~ ಅಂದ ಇಂಗ್ಲಿಷ್ ಮಾಧ್ಯಮ ಓದುವ ಹುಡುಗರು ಕಾನ್ವೆಂಟ್ ಶಾಲೆಯಲ್ಲಿ ಓದುವ ಹುಡುಗರು ಹುಡುಗಿಯರು ಟೈ ಕಟ್ಟುತ್ತಾರೆ.
 
ಎಂ.ಬಿ.ಎ. ಓದುವ ವಿದ್ಯಾರ್ಥಿಗಳಂತೂ ಸೂಟು ಬೂಟು ಹಾಕಿಕೊಂಡು ಟೈ ಕಟ್ಟುತ್ತಾರೆ. ದರ್ಪ ತೋರಿಸಲು, ಏಕೆ ಟೈ ಕಟ್ಟಬೇಕು ಎಂಬುದು ತಿಳಿದಿಲ್ಲ.

ನಾನು 1954 ರಲ್ಲಿ ಜರ್ಮನಿಯಲ್ಲಿ ಇದ್ದಾಗ ಟೈ ಕಟ್ಟುತ್ತಿದ್ದೆ ಆದರೆ ಅಲ್ಲಿ -30~ ಡಿಗ್ರಿ ಚಳಿ ತಡೆಯಲು ಸಾಧ್ಯವಾಗುವಂತೆ ಕತ್ತಿಗೆ ಬಿಗಿಯಾಗಿ ಬಟ್ಟೆ ಸುತ್ತಿಕೊಂಡು, ತಣ್ಣಗಿರುವ ಗಾಳಿ ಷರ್ಟ್ ಒಳಗೆ ಹೋಗದೇ ಇರಲೆಂದು ಹೀಗೆ ಕಟ್ಟುತ್ತಿದ್ದರು. ನಂತರ ಯಾರೋ ಬದಲಾವಣೆ ಮಾಡಿ ಟೈ ರೂಪ ಬಂತು.

ಆ ದೇಶದಲ್ಲಿ ಬೇಸಿಗೆಯಲ್ಲಿ ಟೈ ಕಟ್ಟುವವರೇ ಕಡಿಮೆ. ಸದ್ಯ ಬಿಸಿಲು ಬಂತ್ಲ್ಲಲಾ ಅಂತ ಬನಿಯನ್ ನಿಕ್ಕರುಗಳಲ್ಲೇ ಕಚೇರಿಗೆ ಹೋಗುವುದು ಉಂಟು. ಆದರೆ ನಮ್ಮ ದೇಶದಲ್ಲಿ ಬಿಸಿಲು ಉರಿಯುತ್ತಿದ್ದರೂ ಸೆಕೆ ಆಗುತ್ತಿದ್ದರೂ ಟೈ ಕಟ್ಟುತ್ತಾರೆ, ಕೋಟು ಧರಿಸುತ್ತಾರೆ. ನಾವು ಯೂರೋಪಿನ ಚಳಿಗಾಲದ ಉಡುಪನ್ನು ಉರಿ ಬೇಸಿಗೆಯಲ್ಲಿ ಧರಿಸಿ ಅಧಿಕಾರಿಗಳೆಂದು ತೋರಿಸಿಕೊಳ್ಳುತ್ತೇವೆ.

ಶಾಲಾ ಕಾಲೇಜು ಮಕ್ಕಳಿಗೆ ಸಮ ಉಡುಪೆಂದು ಟೈ ಕಟ್ಟಿಸುತ್ತಾರೆ. ಮಕ್ಕಳಿಗೆ ಅದನ್ನು ಸಿಂಬಳ ಬಂದಾಗ ಮೂಗು ವರಸಿಕೊಳ್ಳಲೂ ಉಪಯೋಗಿಸುವುದನ್ನು ಕಂಡಿದ್ದೇವೆ. ಈ ಅಣಕು ಉಡುಗೆ ತೊಡುಗೆ ಹೋಗಬೇಕು. ನಮ್ಮ ಸಂಸ್ಕೃತಿಗೆ ಅಲ್ಲ.

ನಮ್ಮ ದೇಶಕ್ಕೂ ಅಲ್ಲ. ಈಗ ನೋಡಿ ನಾನು ಕಂಡಂತೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್‌ರವರು ಟೈ ಕಟ್ಟಿದ್ದು ಕಾಣಲಿಲ್ಲ ಜುಬ್ಬ ಮತ್ತು ವೇಸ್ಟ್ ಕೋಟು ಅಥವಾ ಕ್ಲೋಸ್ ಕಾಲರ್ ಕೋಟು ಯಾವ ದೇಶಕ್ಕೆ ಹೋದರೂ ಅದೇ. ಇದು ಎಲ್ಲರಿಗೂ ಉದಾಹರಣೆ ಆಗಬೇಕು.

ದಯಮಾಡಿ ಮಂತ್ರಿಗಳು, ಅಧಿಕಾರಿಗಳು ಸರಳತೆಗೆ ಉದಾಹರಣೆ ಆಗಲಿ. ವಿದೇಶದ ಅಣಕುಬೇಡ. ಟೈ ಕಟ್ಟುವವರಿಗೆ ಮರ್ಯಾದೆ ಕೊಡುವುದನ್ನು ಬಿಡಬೇಕು. ಸರಳತೆಗೆ ಗೌರವ ಕೊಡುವಂತೆ ಆಗಬೇಕು. ಶಾಲಾ ಕಾಲೇಜುಗಳಲ್ಲಿ ಟೈ ಸಂಸ್ಕೃತಿಯನ್ನು ಬಿಡಿಸಬೇಕು. ಭಾರತೀಯತೆಯನ್ನು ಉಳಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT