ADVERTISEMENT

ವಿದ್ಯುತ್ ಕಂಬ ಸರಿಪಡಿಸಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ವಿದ್ಯುತ್ ಕಂಬ ಸರಿಪಡಿಸಿ
ನಗರದ ಮಹದೇವಪುರ ಸಮೀಪದ ದೊಡ್ಡನೆಕ್ಕುಂದಿ ಗ್ರಾಮದಿಂದ ಎಚ್‌ಎಎಲ್ ಮುಖ್ಯ ರಸ್ತೆಯನ್ನು ಸೇರುವ ರಸ್ತೆಯ ಪಕ್ಕದಲ್ಲಿನ ಪುಟ್‌ಫಾತ್ ನಡುವೆ ಇರುವ ವಿದ್ಯುತ್ ದೀಪದ ಕಂಬವೊಂದು ಸಂಪೂರ್ಣವಾಗಿ ಶೀಥಿಲಗೊಂಡಿದ್ದು, ನೆಲಕ್ಕುರುಳುವ ಅಪಾಯದಲ್ಲಿದೆ.

ಇದರಿಂದಾಗಿ ಪ್ರತಿದಿನವೂ ಪಾದಚಾರಿಗಳು ಫುಟ್‌ಫಾತ್ ಮೇಲೆ ಭಯದಿಂದ ಓಡಾಡುವಂತಾಗಿದೆ.ಕಂಬದ ತಳಭಾಗ ಸಾಕಷ್ಟು ತುಕ್ಕು ಹಿಡಿದಿದ್ದು, ಕಂಬ ಭಾಗಿಕೊಂಡಿದೆ. ದೀಪದ ಸ್ವೀಚ್ ಬೋರ್ಡ್ ಕೂಡ ಹದಗೆಟ್ಟು ಹೋಗಿದೆ. ಶೀಥಿಲಗೊಂಡ ವಿದ್ಯುತ್ ಕಂಬದಿಂದ  ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಶೀಘ್ರದಲ್ಲಿಯೇ ಹೊಸದೊಂದು ಕಂಬವನ್ನು ಅಳವಡಿಸಬೇಕು. 
 

======

ಟ್ರಾಫಿಕ್ ಸಿಗ್ನಲ್ ದೀಪ ಬೇಕು
ಮರಿಯಪ್ಪನಪಾಳ್ಯ ವೃತ್ತ ಬಿಬಿಎಂಪಿ ಉಲ್ಲಾಳು ವಾರ್ಡ್ 130ರ ವ್ಯಾಪ್ತಿಯಲ್ಲಿ ಬರುವ ಹೊರ ವರ್ತುಲ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಅಧಿಕವಾಗಿದೆ. ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಯವರೆಗೆ ಹಲವಾರು ಬಡಾವಣೆಗಳಿಂದಲೂ, ಅಡ್ಡರಸ್ತೆಯಿಂದಲೂ ವರ್ತುಲ ರಸ್ತೆಗೆ ಸಂಪರ್ಕವಿದೆ. ದಿನ-ರಾತ್ರಿ ವಾಹನ ಸಂಚಾರ ನಿರಂತರವಾಗಿದೆ. 

ವೃತ್ತದ ಪಕ್ಕದಲ್ಲಿ ಎರಡು ಬದಿಗಳಲ್ಲಿ ಬಸ್ಸು ತಂಗುದಾಣವಿದೆ. ಶಾಲೆಯ ಮಕ್ಕಳು, ಹೆಂಗಸರು, ವಯೋವೃದ್ಧರು, ಪಾದಚಾರಿಗಳು ಆ ಕಡೆಯಿಂದ ಈ ಕಡೆಗೆ ರಸ್ತೆ ದಾಟುವುದೇ ದುಸ್ತರವಾಗಿದೆ. ಕನಿಷ್ಠ 10 ನಿಮಿಷವಾದರೂ ಬೇಕು. ಆದ್ದರಿಂದ ಸಂಬಂಧಿಸಿದವರು ಸಂಚಾರ ಸಮಸ್ಯೆ ಪರಿಶೀಲಿಸಿ, ಈ ವೃತ್ತದಲ್ಲಿ `ಟ್ರಾಫಿಕ್ ಸಿಗ್ನಲ್ ದೀಪ~ದ ವ್ಯವಸ್ಥೆ ಮಾಡಬೇಕು. ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.
 -ಓ.ಎಂ. ಬಸವರಾಜ

=====

ADVERTISEMENT

ದಿಣ್ಣೂರು ರಸ್ತೆಯ ನೂರು ಸಮಸ್ಯೆ
ಆರ್ ಟಿ ನಗರದ ದಿಣ್ಣೂರು ರಸ್ತೆಯ ಚಿತ್ರಾ ಬೇಕರಿ ಪಕ್ಕದ ಅಡ್ಡ ರಸ್ತೆಗಳಲ್ಲಿ ಓಡಾಡುವುದೇ ದುಸ್ತರವಾಗಿದೆ. ಒಂದೆಡೆ ಮೀನು ಮಾರಾಟದ ಅಂಗಡಿ ಇದೆ. ಆದರೆ ನೈರ್ಮಲ್ಯ ಹಾಗೂ ಸುರಕ್ಷೆಯ ಯಾವುದೇ ಕ್ರಮ ಕೈಗೊಳ್ಳದೇ ಮಾರಾಟ ಮಾಡುತ್ತಿದ್ದಾರೆ. ಉಳಿದ ಮಾಂಸದ ಅಂಗಡಿಗಳು ದಿನಪೂರ್ತಿ ತೆರೆದಿರುವುದಿಲ್ಲ.
 
ಈ ಅಂಗಡಿ ಮಾತ್ರ ಇಡೀ ದಿನ ತೆರೆದಿರುತ್ತದೆ. ಗಾಜಿನ ಪೆಟ್ಟಿಗೆಯಲ್ಲಿ ಮೀನು ಮಾರಾಟಕ್ಕೆ ಇರಿಸಿದರೆ ಮೀನುಗಳ ದುರ್ವಾಸನೆಯನ್ನಾದರೂ ತಡೆಯಬಹುದು. ಅಕ್ಕಪಕ್ಕದ ಮನೆಗಳಿಗೆ ಈ ಅಂಗಡಿಯಿಂದ ಹೊರಡುವ ದುರ್ನಾತ ತಡೆಯುವುದೇ ದುಸ್ತರವಾಗಿದೆ. ಸಂಬಂಧಿಸಿದವರು ಇತ್ತ ಗಮನಹರಿಸಿ, ಮೀನು ಮಾರಾಟಕ್ಕೆ ಸಮಯವನ್ನಾದರೂ ನಿಗದಿ ಪಡಿಸಲಿ ಅಥವಾ ಮೀನು ಮಾರಾಟಕ್ಕೆ ಗಾಜಿನ ಪೆಟ್ಟಿಗೆ ಮಾಡಿಟ್ಟು, ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು.

ಈ ಅಂಗಡಿಯಿಂದಾಗಿ ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ಸಣ್ಣ ಮಕ್ಕಳನ್ನು ಬೀದಿಗೆ ಕರೆದೊಯ್ಯುವುದೇ ಕಷ್ಟವಾಗಿದೆ.ಇದು ಚಿತ್ರಾ ಬೇಕರಿಯ ಬಲಬದಿಯ ಅಡ್ಡರಸ್ತೆಯ ಕತೆ. ಎಡ ಬದಿಗೆ ಬೀದಿ ಕಾಮಣ್ಣರ ಕಾಟ ಹೆಚ್ಚಾಗಿದೆ. ಅಪರಿಚಿತರ ಕಾರು ಪಾರ್ಕಿಂಗ್ ತಾಣವಾಗಿ ಮಾರ್ಪಟ್ಟಿದೆ. ರಾತ್ರಿ 8ರಿಂದ ಅಪರಾತ್ರಿಯವರೆಗೆ, ಕೆಲವೊಮ್ಮೆ ಬೆಳಗಿನ ಜಾವ 2ರವರೆಗೂ ಇಲ್ಲಿ ಸಿಗರೇಟು ಸೇದುತ್ತ ಕೂರುವ ಹುಡುಗರಿದ್ದಾರೆ. ಪೊಲೀಸರು ಒಮ್ಮೆ ಇಲ್ಲಿ ಬಂದು ಹೋದರೆ ಇವರ ವರ್ತನೆಗೆ ಕಡಿವಾಣ ಹಾಕಬಹುದೇನೊ?
 -ನೊಂದ ನಿವಾಸಿಗಳು
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.