ADVERTISEMENT

ವಿಭಜಕಕ್ಕೆ ಬೇಲಿ ಹಾಕಿ: ಅಡ್ಡನಡೆ ತಪ್ಪಿಸಿ

ಬಸವರಾಜ ಹುಡೆದಗಡ್ಡಿ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST

ಬೆಂಗಳೂರು ನಗರ ಬೃಹತ್ ಬೆಂಗಳೂರು ಮಹಾನಗರವಾದ ನಂತರ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಾದ ಕಾರಣ ಸಂಚಾರ ಒತ್ತಡದಿಂದ ಅಪಘಾತಗಳಾಗದಂತೆ ಸುಗಮ ಸಂಚಾರಕ್ಕೆ ರಸ್ತೆಗಳ ಮಧ್ಯೆವಿಭಜಕಗಳನ್ನು ಮಾಡಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಾದಚಾರಿಗಳು ಸರಳವಾಗಿ ರಸ್ತೆ ದಾಟಲು ಕೂಡು ರಸ್ತೆ ವರ್ತುಲಗಳ ಬಳಿ ರಸ್ತೆಗೆ ಅಡ್ಡಲಾಗಿ ಬಿಳಿಪಟ್ಟಿಯ ಝೀಬ್ರಾ ಕ್ರಾಸ್ ಹಾಕಿ ಸಂಚಾರ ನಿಯಂತ್ರಣ ದೀಪಗಳನ್ನು ಅಳವಡಿಸಲಾಗಿದೆ. ಕೆಂಪೇಗೌಡ ವರ್ತುಲ ರಸ್ತೆ ಕೆ.ಆರ್. ಸರ್ಕಲ್ ಬಳಿ ಇರುವ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್,ರೇಸ್ ಕೋರ್ಸ್, ರಾಜಭವನ, ರೈಲು ನಿಲ್ದಾಣ ಬಸ್ ನಿಲ್ದಾಣದ ಬಳಿ ಪಾದಚಾರಿಗಳಿಗಾಗಿ ಮೇಲು ಸುರಂಗ ರಸ್ತೆಗಳನ್ನು ನಿರ್ಮಿಸಲಾಗಿದೆ.

ಆದರೆ ಅವುಗಳ ಸದುಪಯೋಗ ಮಾಡಿಕೊಳ್ಳದ ಪಾದಚಾರಿಗಳು ವೇಗವಾಗಿ ಚಲಿಸುವ ವಾಹನಗಳ ನಡುವಿನಿಂದ ರಸ್ತೆ ದಾಟಲು ಹೋಗಿ ಅವಘಡಕ್ಕೆ ಕಾರಣವಾಗುತ್ತಿದೆ.  ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ.

ರೈಲು ನಿಲ್ದಾಣ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದ ಮಧ್ಯೆ ಇರುವ ರಸ್ತೆ ವಿಭಜಕಕ್ಕೆ ಉಕ್ಕಿನ ನಾಲ್ಕಡಿ ಬೇಲಿಯನ್ನು ನಿರ್ಮಿಸಿ ಪಾದಚಾರಿಗಳು ರಸ್ತೆ ದಾಟಲು ಸುರಂಗಮಾರ್ಗ ಬಳಸುವ ಅನಿವಾರ್ಯತೆ ಮಾಡಿದ್ದರಿಂದ ಅಲ್ಲಿ ಯಾವುದೇ ಅವಘಡಕ್ಕೆ ಆಸ್ಪದವಿಲ್ಲ.

ಅದೇ ಪ್ರಕಾರ ಆನಂದರಾವ್ ಸರ್ಕಲ್‌ನಿಂದ ಕೆ.ಆರ್. ಸರ್ಕಲ್, ನೃಪತುಂಗ ರಸ್ತೆ, ರೇಸ್‌ಕೋರ್ಸ್ ರಸ್ತೆಯಿಂದ ವಿಧಾನಸೌಧ, ಮಹಾರಾಣಿ ಕಾಲೇಜ್ ಹಾಗೂ ನಗರದ ವಿವಿಧ ಭಾಗಗಳಲ್ಲಿರುವ ರಸ್ತೆ ವಿಭಜಕಗಳಲ್ಲಿ ವಾತಾವರಣದಲ್ಲಿ ಕಲ್ಮಶ ಹೋಗಲಾಡಿಸುವ ಕಿರುಕಂಟಿಗಳನ್ನು ನೆಟ್ಟು ಅದರಗುಂಟ 3 ರಿಂದ 4 ಅಡಿ ಎತ್ತರದ ಬೇಲಿಗಳನ್ನು ನಿರ್ಮಿಸುವ ಮೂಲಕ ಈ ರಸ್ತೆಗಳಲ್ಲಿ ಪಾದಚಾರಿಗಳು ರಸ್ತೆ ದಾಟುವುದನ್ನು ತಪ್ಪಿಸಲು ಕ್ರಮ ಜರುಗಿಸುವಂತೆ ಈ ಮೂಲಕ ಕೋರುತ್ತೇನೆ.

ಸುಗಮ ವಾಹನ ಸಂಚಾರ ಹಾಗೂ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆದಾಟಲು ನಿರ್ಮಿಸಿದ ಸುರಂಗಮಾರ್ಗ ಬಳಸುವಂತಾಗಲು ರಸ್ತೆಗಳ ವಿಭಜಕ ಗುಂಟ ಬೇಲಿ ಹಾಕಲು ಜನಪರ ಕಾಳಜಿಯ ಸಾರ್ವಜನಿಕ ಸಂಘಟಣೆ ಹಾಗೂ ವಿಚಾರವಾದಿಗಳು ಸರಕಾರ ಹಾಗೂ ಮಹಾನಗರಪಾಲಿಕೆಗೆ ಸಕಾರಾತ್ಮಕವಾದ ಸಲಹೆ ನೀಡಲು ಒತ್ತಾಯಿಸುವೆನು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.