‘ಭಕ್ತಸಾಗರ ಮಧ್ಯೆ ವೈರಮುಡಿ ಉತ್ಸವ’ ಎಂಬ ಶೀರ್ಷಿಕೆಯಡಿ, ಮಂಡ್ಯ ಜಿಲ್ಲೆಯ ಮೇಲುಕೋಟೆಯ ಪ್ರಸಿದ್ಧ ವೈರಮುಡಿ ಉತ್ಸವದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸುದ್ದಿ ಪ್ರಕಟವಾಗಿದೆ (ಮಾ.14). ‘ಸಂಜೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಆಭರಣಗಳನ್ನು ದೇವಸ್ಥಾನದ ಸ್ಥಾನಿಕರಿಗೆ ವಿತರಣೆ (ಪರ್ಕಾವಣೆ) ಮಾಡಲಾಯಿತು.
ಆನಂತರ ಅವರು ದೇವರನ್ನು ಆಭರಣಗಳಿಂದ ಅಲಂಕರಿಸಿದರು’ ಎಂಬ ಅಂಶ ಸುದ್ದಿಯಲ್ಲಿದೆ. ಆದರೆ ವೈರಮುಡಿ ಕಿರೀಟ ಆಭರಣದ ಪೆಟ್ಟಿಗೆಯ ಸೀಲ್ ಪರಿಶೀಲಿಸಿದ ನಂತರ ದೇವಸ್ಥಾನದ ಪ್ರಧಾನ ಅರ್ಚಕ ವರದರಾಜ ಭಟ್ಟರ್ ಮತ್ತು ಮೊದಲನೇ ಸ್ಥಾನಿಕ ಕರಗಂ
ನಾರಾಯಣಯ್ಯಂಗಾರ್ ಅವರ ಜಂಟಿ ಸುಪರ್ದಿಗೆ ದೇವರ ಧಾರಣೆ ಬಗ್ಗೆ ಹಸ್ತಾಂತರಿಸಲಾಗುತ್ತದೆ ಮತ್ತು ಅರ್ಚಕರು ಕಿರೀಟವನ್ನು ದೇವರಿಗೆ ಧರಿಸಿ ಅಲಂಕರಿಸುತ್ತಾರೆಯೇ ವಿನಾ ಸ್ಥಾನಿಕರಲ್ಲ.
ಈ ವರ್ಷವೂ ಅದೇ ರೀತಿ ನಡೆದಿದೆ. ರಾಜಮುಡಿ ಮತ್ತು ಅದರ ಜೊತೆ ಬಂದಿರುವ ಇತರೆ ಆಭರಣಗಳನ್ನೂ ಅರ್ಚಕರು, ಪರಿಚಾರಕರು ಮತ್ತು 4 ಜನ ಸ್ಥಾನಿಕರು, ಕಾವಲುಗಾರರು ಇವರ ಜಂಟಿ ಸುಪರ್ದಿಗೆ ವಹಿಸಲಾಗುತ್ತದೆಯೇ ವಿನಾ ಸ್ಥಾನಿಕರಿಗೆ ಮಾತ್ರ ವಿತರಿಸುವುದಿಲ್ಲ. ಈ ಆಭರಣಗಳನ್ನು ಸಹ ಅರ್ಚಕರು ಮಾತ್ರ ದೇವರಿಗೆ ಧರಿಸಿ ಅಲಂಕರಿಸುತ್ತಾರೆಯೇ ವಿನಾ ಸ್ಥಾನಿಕರಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಮೇಲಿನಂತೆಯೇ ನಡೆದಿದೆ. ಈ ಕುರಿತು ದೇವಾಲಯದ ದಾಖಲೆಗಳನ್ನು ಪರಿಶೀಲಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.