ADVERTISEMENT

ಸಂಪತ್ತಿನ ಸೃಷ್ಟಿ– ಲೂಟಿ

ನಾಗೇಶ ಹೆಗಡೆ
Published 24 ಮೇ 2018, 19:30 IST
Last Updated 24 ಮೇ 2018, 19:30 IST

₹ 6,500 ಕೋಟಿಗೂ ಹೆಚ್ಚಿನ ಸಂಪತ್ತಿನ ಒಡೆಯರೆನಿಸಿದ ಕುಬೇರರ ಸಂಖ್ಯೆ ಭಾರತದಲ್ಲಿ 119ಕ್ಕೆ ಏರಿದೆಯೆಂಬ ಸುದ್ದಿಗೆ (ಪ್ರ.ವಾ., ಮೇ 24) ಸಂಬಂಧಿಸಿ ಈ ಪತ್ರ. ಇಂಥವರಿಗೆ ‘ಡಾಲರ್ ಬಿಲಿಯನೇರ್ಸ್’ ಎನ್ನುತ್ತಾರೆ.

ನಮ್ಮಲ್ಲಿರುವ ಡಾಲರ್ ಶತಕೋಟ್ಯಧೀಶರಿಗಿಂತ ಹೆಚ್ಚಿನ ಸಂಖ್ಯೆಯ ಶ್ರೀಮಂತರು ಚೀನಾ ಮತ್ತು ಅಮೆರಿಕಗಳಲ್ಲಿ ಇದ್ದಾರೆ ನಿಜ. ಆದರೆ ಆ ದೇಶಗಳ ಕೋಟ್ಯಧೀಶರು ತಮ್ಮ ನೆಲದಲ್ಲಿ ಔದ್ಯಮಿಕ ಉತ್ಪಾದನೆಯನ್ನು, ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸುತ್ತ ದೇಶದ ಸಂಪತ್ತನ್ನು ಸೃಷ್ಟಿಸುವ ಮೂಲಕ ತಮ್ಮ ಸಂಪತ್ತನ್ನೂ ಹೆಚ್ಚಿಸಿಕೊಳ್ಳುತ್ತಾರೆ. ನಮ್ಮಲ್ಲಿ ಹಾಗಲ್ಲ.

ಖನಿಜ, ತೈಲನಿಕ್ಷೇಪ, ಅರಣ್ಯಗಳಂಥ ನೈಸರ್ಗಿಕ ಸಂಪತ್ತನ್ನು ಬಾಚಿಕೊಳ್ಳುತ್ತ, ರಿಯಲ್ ಎಸ್ಟೇಟ್ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತ ಕೋಟ್ಯಧೀಶರಾಗುವುದೇ ಹೆಚ್ಚು.

ADVERTISEMENT

ರಫ್ತು ಉದ್ಯಮದಲ್ಲಿ ತೊಡಗಿದವರೂ ಹೆಚ್ಚಾಗಿ ಗಣಿಗಾರಿಕೆ ಮಾಡುತ್ತ ನಾಳಿನವರ ಸಂಪತ್ತನ್ನು ಇಂದೇ ಖಾಲಿ ಮಾಡುತ್ತ, ಸ್ಟರ್ಲೈಟ್ ಮಾದರಿಯಲ್ಲಿ ಗಾಳಿಗೆ, ನೀರಿಗೆ ವಿಷ ತುಂಬುತ್ತ, ಅಡ್ಡ ಬಂದವರನ್ನು ತುಳಿಯುತ್ತ, ರಕ್ತ ಮೆತ್ತಿಕೊಂಡ ಕೈಯಲ್ಲೇ ಅಧಿಕಾರಿಗಳಿಗೆ- ರಾಜಕೀಯ ಪಕ್ಷಗಳಿಗೆ ಬಿಸ್ಕಿಟ್ ಬಿಸಾಕುತ್ತ, ಸಾಲ ಮನ್ನಾ ಮಾಡಿಸಿಕೊಳ್ಳುತ್ತ ಅಥವಾ ಬ್ಯಾಂಕ್‌ಗಳಿಗೆ ಪಂಗನಾಮ ಹಾಕುತ್ತ ಕೋಟ್ಯಧೀಶರಾಗುತ್ತಾರೆ.

ಚೀನಾದಲ್ಲಿ ಮರಣದಂಡನೆಗೆ ಗುರಿಯಾಗುವವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ದೇಶಕ್ಕೆ ಆರ್ಥಿಕ ನಷ್ಟ ಉಂಟುಮಾಡಿದವರೇ ಆಗಿರುತ್ತಾರೆ. ನಮ್ಮಲ್ಲಿ ಅಂಥವರಿಗೆ ರಾಜಾತಿಥ್ಯ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.