ADVERTISEMENT

ಸತ್ಯ ಆಘಾತಕಾರಿ!

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST

‘ಹಿಂದೂ– ವೈದಿಕ ಧರ್ಮವಲ್ಲ’ (ವಾ.ವಾ., ಮಾರ್ಚ್‌ 20) ಎಂಬ ಡಿ.ಎಸ್‌. ನಾಗಭೂಷಣ ಅವರ ಪತ್ರಕ್ಕೆ ಈ ಪ್ರತಿಕ್ರಿಯೆ.

ಹಿಂದೂ ಧರ್ಮದ ಸೂತ್ರಧಾರರು ವೈದಿಕರು. ಅವರೇ ಧರ್ಮದ ಮುಂದಾಳುಗಳು ಎಂಬುದರಲ್ಲಿ ಭಿನ್ನಾಭಿಪ್ರಾಯವೇ ಇಲ್ಲ.

ಹಿಂದೂ ಹೆಸರು ಪ್ರಸ್ತಾಪಿಸಿದ್ದು ಸಿಂಧೂ (ಹಿಂದೂ) ನದಿಯ ಆಚೆಯ ಮುಸ್ಲಿಮೇತರ ಜನಸಮುದಾಯವನ್ನು ಗುರುತಿಸುವುದಕ್ಕೋಸ್ಕರ. ಅದು ಮುಸ್ಲಿಮರ ದಾಳಿಯ ನಂತರದ ಬೆಳವಣಿಗೆ. ಧಾರ್ಮಿಕ– ಸಂಸ್ಕೃತಿ ಚಿಂತಕರು ಉದ್ದೇಶಪೂರ್ವಕವಾಗಿ ಇದನ್ನು ಮರೆಮಾಚುತ್ತಿದ್ದಾರೆ.

ADVERTISEMENT

ವಿವಿಧ ಧರ್ಮಗಳ ಜನಸಮೂಹವನ್ನು ಹಿಂದೂ ಧರ್ಮದ ಅಡಿಯಲ್ಲಿ ತಂದು ಧಾರ್ಮಿಕ ಸ್ವರೂಪ ನೀಡಿದ ಬ್ರಿಟಿಷರು, 1861ರಲ್ಲಿ ‘ಹಿಂದೂ’ ಹೆಸರಿನಲ್ಲಿ ಜನಗಣತಿ ಪ್ರಾರಂಭಿಸಿದ್ದು ಇತಿಹಾಸ.

ವೈದಿಕ ಧರ್ಮದ ದಬ್ಬಾಳಿಕೆ, ಯಜ್ಞ ಸಂಸ್ಕೃತಿ, ಮೂಢನಂಬಿಕೆಗಳನ್ನು ವಿರೋಧಿಸಿ ಬುದ್ಧ ಮತ್ತು ಜೈನ ಪರಂಪರೆಗಳು ತಮ್ಮ ಅಸ್ತಿತ್ವ ನಿರ್ಮಿಸಿಕೊಂಡಿದ್ದರೂ ಅವನ್ನೂ ಹಿಂದೂ ಧರ್ಮದ ಪಂಗಡಗಳೆಂದು ಕರೆಯಲಾಗುತ್ತದೆ. ಇದು ಸಮಂಜಸವೇ? ಇದಕ್ಕೆ ಅನುಗುಣವಾಗಿಯೇ 800 ವರ್ಷಗಳ ಹಿಂದೆ ಹುಟ್ಟಿದ ಲಿಂಗಾಯತ ಪರಂಪರೆಯು ಅಸ್ತಿತ್ವಕ್ಕಾಗಿ ಇನ್ನೂ ಹೋರಾಡುತ್ತಿದೆ. ನಂಬಿಕೆಗಳು ಹಾಗೆಯೇ ಇರಬೇಕು ಎನ್ನುವವರಿಗೆ ಸತ್ಯ ಸಂಗತಿ ಆಘಾತ ನೀಡುತ್ತದೆ.

ಯಾವ ಧರ್ಮವು ಕಾಲಾನುಕ್ರಮದಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸುವುದಿಲ್ಲವೋ ಅದು ತನ್ನಷ್ಟಕ್ಕೆ ತಾನೇ ನಾಶವಾಗುವುದು ಪ್ರಕೃತಿ ನಿಯಮ.

– ಎಸ್.ಎ. ಕಾಂಬಳೆ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.