ADVERTISEMENT

ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಮಂಗಳವಾರದ `ಪ್ರಜಾವಾಣಿ~ ಪತ್ರಿಕೆಯ ಮುಖಪುಟದಲ್ಲಿ ಆಘಾತಕಾರಿ ಸುದ್ದಿ ಓದಿ ಬೇಸರವಾಯಿತು. ಪ್ರೊ.ಆರ್. ಗೋವಿಂದರವರ ನೇತೃತ್ವದಲ್ಲಿ ಸರ್ಕಾರ ಸಮಿತಿಯನ್ನು ಎಂದು, ಏಕೆ ರಚಿಸಿತು? ಪ್ರೊ.ಆರ್. ಗೋವಿಂದರವರ ಪರಿಚಯ ಕರ್ನಾಟಕ ಶಿಕ್ಷಣ ಕ್ಷೇತ್ರಕ್ಕೆ ಇಲ್ಲ.

ದೂರದ ದೆಹಲಿಯ ಖಾಸಗಿ ವಿ.ವಿಯ ಉಪಕುಲಪತಿ ಕರ್ನಾಟಕದ ಶಾಲೆಗಳನ್ನು ಉನ್ನತೀಕರಿಸುವ ಬಗ್ಗೆ ಮಾತನಾಡಿದ್ದಾರೆ. ಅವರು ಎಷ್ಟು ಶಾಲೆಗಳಿಗೆ ಹೋಗಿ ಭೇಟಿ ಮಾಡಿದ್ದಾರೆ? ಎಷ್ಟು ಶಾಲಾ ಶಿಕ್ಷಕರು ಹಾಗೂ ಪೋಷಕರನ್ನು ಭೇಟಿ ಮಾಡಿದ್ದಾರೆ? ಪ್ರತಿಯೊಂದು ಮಗುವಿಗೂ ಶಿಕ್ಷಣ ನೀಡುವ ಜವಾಬ್ದಾರಿ ಸರ್ಕಾರದ್ದಾಗಬೇಕು.

ಅದಕ್ಕಾಗಿ ಅಗತ್ಯವಿರುವ ಶಿಶು ಸ್ನೇಹಿ ಶಾಲೆಗಳನ್ನು ನಿರ್ಮಿಸಬೇಕೆಂದು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಹೇಳುತ್ತದೆ. ರಾಜ್ಯಕ್ಕೆ ಸುಮಾರು 3000ಕ್ಕೂ ಅಧಿಕ ಶಾಲೆಗಳನ್ನು ಪ್ರಾರಂಭಿಸಬೇಕಾದ ಅಗತ್ಯವಿದೆ, ಅದನ್ನು ಜಾರಿಗೊಳಿಸಲು ಮುಂದಾಗದೆ 12,740 ಶಾಲೆಗಳನ್ನು ಮುಚ್ಚಬೇಕೆಂದು ಕೊಟ್ಟಿರುವ ವರದಿ ಕನ್ನಡ ಭಾಷೆಗೆ ಬಗೆದ ದ್ರೋಹವಾಗಿದೆ ಮತ್ತು ಶಾಲಾ ಶಿಕ್ಷಣವನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಹುನ್ನಾರ ಇದರಲ್ಲಿ ಅಡಗಿದೆ.

ರಾಜ್ಯದಲ್ಲಿ 1,21,000 ಬಾಲ ಕಾರ್ಮಿಕ ಮಕ್ಕಳಿದ್ದಾರೆ. ಈ ಮಕ್ಕಳನ್ನೆಲ್ಲ ಶಾಲೆಗೆ ಸೇರಿಸುವಂತಾಗಲು ಸರ್ಕಾರ ಯೋಚಿಸಬೇಕಿದೆ. ಆ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ 12,740 ಶಾಲೆಗಳನ್ನು ವಸತಿ ಶಾಲೆಗಳನ್ನಾಗಿ ಪರಿವರ್ತಿಸಿದರೆ ಸಂವಿಧಾನಬದ್ಧ ಶಿಕ್ಷಣದ ಹಕ್ಕನ್ನು ಉಳಿಸಿದಂತಾಗುತ್ತದೆ.
 
ಈ ಶಿಕ್ಷಣ ವಿರೋಧಿ ವರದಿಯನ್ನು ತಿರಸ್ಕರಿಸಿ 12,740 ಸರ್ಕಾರಿ ಶಾಲೆಗಳ ಉಳಿವಿಗಾಗಿ  ಸಾರ್ವಜನಿಕರೆಲ್ಲರೂ ಧ್ವನಿ ಎತ್ತಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.