ADVERTISEMENT

ಸರ್ಕಾರಿ ಶಾಲೆಗಳ ನಿರ್ಲಕ್ಷ್ಯಕ್ಕೆ ಕಾರಣವೇನು?

ಸಾಮಗ ದತ್ತಾತ್ರಿ
Published 5 ಜೂನ್ 2011, 19:30 IST
Last Updated 5 ಜೂನ್ 2011, 19:30 IST

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆಯಾದರೆ ಶಿಕ್ಷಕರನ್ನೆ ಹೊಣೆಗಾರರೆಂದು ಮಾಡುವುದಾಗಿ ಎಚ್ಚರಿಕೆ ನೀಡಿರುವ ಪ್ರಾಥಮಿಕ ಶಿಕ್ಷಣ ಖಾತೆ ಸಚಿವ ಕಾಗೇರಿ ಅವರ ನಿಲುವನ್ನು ಸಂಪೂರ್ಣವಾಗಿ ಒಪ್ಪುವುದು ಸಾಧ್ಯವಿಲ್ಲ.

ಸರ್ಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಯಾಕೆ ಮನಸ್ಸು ಮಾಡುವುದಿಲ್ಲ? ಈ ಶಾಲೆಗಳ ಸ್ಥಿತಿಗತಿಗಳು ಹೇಗಿವೆ? ಶಿಕ್ಷಕರ ಸಂಖ್ಯೆ ಸಮರ್ಪಕವಾಗಿದೆಯೇ? ಶಿಕ್ಷಕರು ತಮ್ಮ ಪಾಠಪ್ರವಚನಗಳನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆಯೇ?

ಪ್ರತಿದಿನದ ಪಾಠದ ಬಗ್ಗೆ ಪೂರ್ವಸಿದ್ಧತೆ ಮಾಡಿಕೊಳ್ಳುವರೇ? ನೋಟ್ಸ್ ಆಫ್ ಲೆಸನ್ಸ್ ಸಿದ್ಧಪಡಿಸುವ ನಿಯಮ ಈಗಲೂ ಇದೆಯೇ? ಇದ್ದರೆ, ಶಿಕ್ಷಕರು ಸಿದ್ಧಪಡಿಸುವ ಇದನ್ನು ಯಾರು ಅವಲೋಕಿಸುತ್ತಾರೆ? ಇದರಲ್ಲಿ ಪಾಲುದಾರಿಕೆ ಮಾಡುವವರ ಬಗ್ಗೆ ಶಿಸ್ತಿನ ಕ್ರಮ ಕೈಗೊಳ್ಳುವವರು ಯಾರು?

ಹಿಂದೆಲ್ಲ ತನಿಖಾ ತಂಡ ಇರುತ್ತಿತ್ತು. ಆಯಾ ವಿಷಯಗಳಲ್ಲಿ ನುರಿತ ಶಿಕ್ಷಕರು ಆಗಿಂದಾಗ್ಗೆ ಶಾಲೆಗಳಿಗೆ ಹೋಗಿ ಪಾಠಪ್ರವಚನ ಹೇಗೆ ನಡೆಯುತ್ತಿದೆನ್ನುವುದರ ಕುರಿತು ತನಿಖೆ ನಡೆಸಿ ಸೂಕ್ತ ಸಲಹೆ ನೀಡುತ್ತಿದ್ದರು, ಮತ್ತು ವರದಿ ನೀಡುತ್ತಿದ್ದರು.
 
ಶಿಕ್ಷಕರೆಂದರೆ ಆಗ ಗೌರವ ಭಾವನೆ ಜನರಲ್ಲಿತ್ತು. ಮುಖ್ಯವಾಗಿ ಈಗಿನಂತೆ ಆಗ ಶಿಕ್ಷಕ ವೃಂದದ ಮೇಲೆ ಪಠ್ಯೇತರ ಹೊರೆ ಹೊಣೆಗಾರಿಕೆಗಳಿರಲಿಲ್ಲ. ಈಗ ಎಲ್ಲದಕ್ಕೂ ಶಿಕ್ಷಕರು ಬೇಕು? ಪಾಠ ಪ್ರವಚನ ಸರ್ಕಾರಕ್ಕೂ ಬೇಕಿಲ್ಲ, ಶಿಕ್ಷಕರಿಗೂ ಆಗದು.

ಇವು ಬಹುಶಃ, ಇಂದಿನ ಸರ್ಕಾರಿ ಶಾಲೆಯು ಒದಗಿಸುವ ಚಿತ್ರಣ. ಕಾಗೇರಿಯವರಿಗೆ ಹಾಗೂ ಶಿಕ್ಷಣ ಇಲಾಖೆಗೆ ಈಗಿನ ಇಂತಹ ವಿದ್ಯಮಾನಗಳ ಬಗ್ಗೆ ಅರಿವಿದೆಯೊ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.