ADVERTISEMENT

ಸರ್ಕಾರಿ ಶಿಕ್ಷಣ: ಉಡಾಫೆ ಬೇಡ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

‘ಸರ್ಕಾರಿ ಶಿಕ್ಷಕರೇಕೆ ಹೀಗೆ?’ (ಪ್ರಜಾವಾಣಿ ಜ.17. ಶಿಕ್ಷಣ ಪುರವಣಿ ಲೇ: ಪದ್ಮಿನಿ ವಿಶ್ವನಾಥ್) ಲೇಖನ ನಮ್ಮ ಇಂದಿನ ಸರ್ಕಾರಿ ಪ್ರಾಥಮಿಕ ಶಾಲೆಗಳ ಪರಿಸರದ ಸಮಸ್ಯೆಯ ಸಂಕೀರ್ಣತೆಯನ್ನು ಸೂಕ್ಷ್ಮ ಹಾಗೂ ವಸ್ತುನಿಷ್ಠವಾಗಿ ಗ್ರಹಿಸಲು ಆಗದ ಕೆಲ ಮೇಲ್ವರ್ಗದ ಮಂದಿಯ ಉಡಾಫೆಯ ಧೋರಣೆಯ ಪ್ರತಿಬಿಂಬವಾಗಿದೆ.

ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಕೌಟುಂಬಿಕ ಹಿನ್ನೆಲೆ, ಆರ್ಥಿಕ -ಸಾಮಾಜಿಕ ಹಾಗೂ ಸಾಂಸ್ಕೃತಿಕವಾದ ಹಿಂದುಳಿದಿರುವಿಕೆ, ಮನೆ ಮತ್ತು ಸುತ್ತಮುತ್ತಲಲ್ಲಿ ಮುತ್ತಿಕೊಂಡಿರುವ ಶೈಕ್ಷಣಿಕ ಸಂಸ್ಕಾರರಾಹಿತ್ಯ ಇತ್ಯಾದಿ ಎಲ್ಲ ನಾಗರಿಕರು ನಾಚಿ ತಲೆ ತಗ್ಗಿಸಬೇಕಾದಂತಹ ನಗ್ನ ಸತ್ಯಗಳು ಇವರಿಗೆಲ್ಲಿ ಕಾಣುತ್ತವೆ!

ಅವರೇ ಹೇಳಿರುವಂತಹ ಸಮುದಾಯದತ್ತ ಶಾಲೆ, ಚಿಣ್ಣರ ಯೋಜನೆ ಮುಂತಾದ ನಾನಾ ತರಹದ ಇಲಾಖಾ ಒತ್ತಡಗಳು ಖಾಸಗಿ ಶಾಲಾ ಶಿಕ್ಷಕರುಗಳಿಗೆ ಇವೆಯೇ? ಇಂತಹ ಬಿಡಿಸಲಾಗದ ಕಗ್ಗಂಟಾಗಿ ಸರ್ಕಾರಿ ಪ್ರಾಥಮಿಕ ಶಿಕ್ಷಣ ನರಳುತ್ತಿದೆ.

ಎಷ್ಟು ಸರ್ಕಾರಿ ಶಾಲೆಗಳಲ್ಲಿ  ಖಾಸಗಿ ಶಾಲೆಗಳಲ್ಲಿರುವಂತಹ ಕೊಠಡಿ, ಪೀಠೋಪಕರಣಗಳು, ಗ್ರಂಥಾಲಯ, ಪ್ರಯೋಗ ಶಾಲೆ, ಕ್ರೀಡಾ ಸಾಮಗ್ರಿ, ಅಗತ್ಯ ಶಿಕ್ಷಕರ ಸಂಖ್ಯೆ, ಶೌಚಾಲಯ ಇತ್ಯಾದಿ ಪೂರಕ ಸವಲತ್ತುಗಳಿವೆ? ಹಣ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ಯಾವುದೇ ರೀತಿಯ ಮೂಲ ಸೌಲಭ್ಯಗಳಿಲ್ಲದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವುದು ಬಡ ಮಕ್ಕಳಿಗೆ ಅನಿವಾರ್ಯವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.