ADVERTISEMENT

ಸಾಮಾನ್ಯ ಸಿಇಟಿ ಮಾರಕ

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 19:30 IST
Last Updated 26 ಜೂನ್ 2012, 19:30 IST

ದೇಶದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಿಗೂ ಅನ್ವಯವಾಗುವಂತೆ  ಸಾಮಾನ್ಯ ಪ್ರವೇಶ ಪರೀಕ್ಷೆಯ ಏರ್ಪಾಡು ಮಾಡಲು ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ತುದಿಗಾಲ ಮೇಲೆ ನಿಂತಿದ್ದಾರೆ. ಕೇಂದ್ರ ಸ್ಥಾಪಿಸಿರುವ ಐಐಟಿ ಸಂಸ್ಥೆಗಳೇ ತಮ್ಮ ಸ್ವಾಯತ್ತತೆಗೆ ಧಕ್ಕೆ ಉಂಟಾಗಲಿದೆ ಎಂದು ಇದನ್ನು ವಿರೋಧಿಸುತ್ತಿವೆ.
 
ಹೀಗಿರುವಾಗ ಕರ್ನಾಟಕ ಸರ್ಕಾರ ಸುಮ್ಮನಿರುವುದು ಸರಿಯಲ್ಲ.
ದೇಶಕ್ಕೆ ಒಂದೇ ಸಿಇಟಿ ಎಂಬುದು ಕೇಳಲು ಚೆನ್ನ. ಆದರೆ ಈ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸೀಟು ಪಡೆಯಬಹುದು ಅನ್ನುವಂತಹ ನಿಯಮ ತಂದರೆ ಕೇಂದ್ರದ ಸಿಇಟಿಯಲ್ಲಿ  ಉತ್ತಮ ಅಂಕ ಪಡೆಯುವ ಉತ್ತರಪ್ರದೇಶ, ಬಿಹಾರ ರಾಜ್ಯಗಳ ವಿದ್ಯಾರ್ಥಿಗಳೇ ಕರ್ನಾಟಕದ ಎಲ್ಲ ಕಾಲೇಜುಗಳಲ್ಲೂ ತುಂಬಿ ಕನ್ನಡಿಗರು ಅವಕಾಶ ವಂಚಿತರಾಗುತ್ತಾರೆ.

ಈಗಿನ ವ್ಯವಸ್ಥೆಯಲ್ಲಿ ನೀಡಲಾಗುತ್ತಿರುವ ಮೀಸಲಾತಿಯನ್ನು ಈ ಹೊಸ ವ್ಯವಸ್ಥೆಯಲ್ಲಿ ಹೇಗೆ ಉಳಿಸಿಕೊಳ್ಳಲಾಗುವುದು ಅನ್ನುವುದು ತಿಳಿದಿಲ್ಲ.   ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಇದರಿಂದ ತೊಂದರೆ ಆಗಲಿದೆ. ಭಾರತ ಬಹು ಭಾಷಾ ಪ್ರಾಂತ್ಯಗಳ ಒಕ್ಕೂಟ. ಇಲ್ಲಿ ಎಲ್ಲವನ್ನೂ `ಒಂದು ದೇಶ, ಒಂದು ವ್ಯವಸ್ಥೆ~ ಅನ್ನುವ ಕಣ್ಣಿನಿಂದ ನೋಡಿ ದೆಹಲಿಯಿಂದಲೇ ಎಲ್ಲವನ್ನು ಜಾರಿಗೊಳಿಸುವ ಕೇಂದ್ರೀಕೃತ ಪ್ರಯತ್ನ ಎಂದಿಗೂ ಯಶಸ್ವಿಯಾಗದು.

ಈ ಹಿನ್ನೆಲೆಯಲ್ಲಿ ಕನ್ನಡದ ವಿದ್ಯಾರ್ಥಿಗಳ ಹಕ್ಕಿನ ರಕ್ಷಣೆಯನ್ನು ಹೇಗೆ ಮಾಡಲಿದೆ ಎನ್ನುವುದನ್ನು  ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು. ಕಷ್ಟಪಟ್ಟು ಉನ್ನತ ಶಿಕ್ಷಣ ಪಡೆಯುತ್ತಿರುವ ಕನ್ನಡದ ಮಕ್ಕಳು ಅದರಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.