ADVERTISEMENT

ಖನಿಜವಲ್ಲ; ಆದರೂ ಅಮೂಲ್ಯ

ಕೆಜಿಎಫ್‌ ಸಮೀಪದ ಪೆದ್ದಪಲ್ಲಿಯ ಹತ್ತಿರ ವಜ್ರ, ಪ್ಲಾಟಿನಮ್‌, ಚಿನ್ನ ಅಪಾರ ಪ್ರಮಾಣದಲ್ಲಿ ದೊರಕುತ್ತದೆ ಎಂಬುದು ಕೇವಲ ವದಂತಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2019, 20:00 IST
Last Updated 14 ಜನವರಿ 2019, 20:00 IST

ಕೆಜಿಎಫ್ ಸಮೀಪದ ಪೆದ್ದಪಲ್ಲಿಯ ಹತ್ತಿರದ ಶಿಲೆಗಳಲ್ಲಿ ವಜ್ರ, ಪ್ಲಾಟಿನಮ್, ಚಿನ್ನದಂತಹ ಖನಿಜಗಳು ಅಪಾರವಾಗಿ ದೊರಕುತ್ತವೆ ಎಂದು ಕೆಲವು ಮಾಧ್ಯಮಗಳು ಇತ್ತೀಚೆಗೆ ಸುದ್ದಿ ಹರಡಿದ್ದೇ ತಡ, ಅದು ರಾಜ್ಯದಾದ್ಯಂತ ವ್ಯಾಪಿಸಿ ದೊಡ್ಡ ವದಂತಿಯಾಗಿ ಮಾರ್ಪಟ್ಟಿತು. ವಿಜ್ಞಾನಿಯಾದ ನನಗೆ ಇದರ ಸಂಪೂರ್ಣ ಹಿನ್ನೆಲೆ ತಿಳಿದಿರುವುದರಿಂದ, ಈ ವಿಷಯದಲ್ಲಿ ಉಂಟಾಗಿರುವ ತಪ್ಪು ತಿಳಿವಳಿಕೆ ಬಗ್ಗೆ ಇಲ್ಲಿ ವಿವರಣೆ ನೀಡಿದ್ದೇನೆ.

ಪೆದ್ದಪಲ್ಲಿ ಹತ್ತಿರ ಇರುವ ಪೈರೊಕ್ಲಾಸ್ಟಿಕ್ ಕಂಗ್ಲಾಮರೇಟ್ ರಾಕ್‌ಗಳು ವೇಗವಾಗಿ ಸ್ಫೋಟಗೊಳ್ಳುವ ಜ್ವಾಲಾಮುಖಿಯ ಬಿಸಿ ಅನಿಲ ಅಥವಾ ಮ್ಯಾಗ್ಮದಿಂದ ರೂಪುಗೊಂಡ ಶಿಲೆಗಳು. ಜ್ವಾಲಾಮುಖಿಯು ಭೂಫಲಕಗಳಲ್ಲಿರುವ ಬಿರುಕುಗಳ ಮೂಲಕ ಸ್ಫೋಟಗೊಳ್ಳುವಾಗ, ಅದರ ಜೊತೆಗೆ ಅಕ್ಕಪಕ್ಕದ ಗೋಡೆಗಳಲ್ಲಿನ ಶಿಲೆಗಳು ಮುರಿದುಬಿದ್ದ ಮ್ಯಾಗ್ಮದ ಜೊತೆಗೆ ಮೇಲಕ್ಕೆ ಹಾರುತ್ತವೆ. ನಂತರ ಮ್ಯಾಗ್ಮ ಮತ್ತೆ ಒಳಕ್ಕೆ ಬಿದ್ದಾಗ ರೂಪುಗೊಂಡಿರುವುದೇ ಪೆದ್ದಪಲ್ಲಿ ಹತ್ತಿರ ಇರುವ ಶಿಲೆಗಳು. ಹಾಗಾಗಿ, ಜೀರ್ಣವಾಗದ ಅಥವಾ ಜ್ವಾಲಾಮುಖಿಯ ಬೆಂಕಿಯಲ್ಲಿ ಸಂಪೂರ್ಣವಾಗಿ ಕರಗದೇ ಉಳಿದುಕೊಂಡಿರುವ ವಿವಿಧ ಆಕಾರದ ಕಲ್ಲುಗುಂಡುಗಳನ್ನು ಇಲ್ಲಿ ನೋಡಬಹುದಾಗಿದೆ. ಅದಕ್ಕಾಗಿಯೇ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (ಜಿ.ಎಸ್.ಐ) ಇವನ್ನು ಬಹಳ ಅಪರೂಪದ ಭೂಸ್ಮಾರಕ ಶಿಲೆಗಳೆಂದು ಘೋಷಿಸಿ ಸಂರಕ್ಷಿಸುತ್ತಿದೆ. ದೇಶ ವಿದೇಶಗಳ ಭೂವಿಜ್ಞಾನಿಗಳು ಇಲ್ಲಿ ಬಂದು ಸಂಶೋಧನೆ ಮಾಡಿ ಹೋಗುತ್ತಾರೆ. ಈ ಶಿಲೆಗಳು ಅಪರೂಪದವಾದರೂ ಜಗತ್ತಿನ ಬೇಕಾದಷ್ಟು ಕಡೆ ಮತ್ತು ನಮ್ಮ ದೇಶದಲ್ಲೂ ಹಲವು ಕಡೆ ದೊರಕುತ್ತವೆ.

ಪೆದ್ದಪಲ್ಲಿ ಹತ್ತಿರದ ಶಿಲೆಗಳನ್ನು ಜಿ.ಎಸ್.ಐ 1974ರಲ್ಲಿಯೇ ಭಾರತೀಯ ಭೂವೈಜ್ಞಾನಿಕ ಸ್ಮಾರಕ ಎಂದು ಘೋಷಿಸಿದೆ. ಇನ್ನುಳಿದಂತೆ, ಕರ್ನಾಟಕದಲ್ಲಿ ಬೇರೆಬೇರೆ ರೀತಿಯ ಮೂರು ಭಾರತೀಯ ಭೂವೈಜ್ಞಾನಿಕ ಸ್ಮಾರಕಗಳಿವೆ. ಒಂದು, ಚಿತ್ರದುರ್ಗದ ಮರಡಿಹಳ್ಳಿಯ ಹತ್ತಿರ ದೊರಕುವ ಪಿಲ್ಲೊ ಲಾವಾ. ಸಮುದ್ರದ ಕೆಳಗೆ ಭೂಗರ್ಭದಿಂದ ಮ್ಯಾಗ್ಮ ಉಕ್ಕಿ ನೀರಿಗೆ ಬಿದ್ದಾಗ, ತಲೆದಿಂಬಿನ ಆಕಾರದ ಈ ಲಕ್ಷಾಂತರ ಶಿಲೆಗಳು ರೂಪುಗೊಂಡಿವೆ. ಕೆಜಿಎಫ್ ಗಣಿ ಪ್ರದೇಶದ ಮಧ್ಯೆ ಮತ್ತು ಕೆಜಿಎಫ್ ದಕ್ಷಿಣದಲ್ಲಿರುವ ವಿರೂಪಾಕ್ಷಿಪುರಂ ಹತ್ತಿರದಲ್ಲೂ ಕೆಲವು ಪಿಲ್ಲೊ ಲಾವಾಗಳು ದೊರಕುತ್ತವೆ. ಎರಡು, ದಕ್ಷಿಣ ಕನ್ನಡದ ಸೇಂಟ್ ಮೇರಿಸ್ ದ್ವೀಪಗಳ ಗುಂಪಿನ ಕೋಕೊನಟ್ ದ್ವೀಪದಲ್ಲಿ ದೊರಕುವ ಸ್ತಂಭಾಕೃತಿಯ ಕಲ್ಮನಾರ್ ಜಾಯಿಂಟ್‍ಗಳು. ಇವು ಕೂಡ ಸಮುದ್ರದ ಕೆಳಗೆ ಉಕ್ಕಿ ಬರುವ ಬಸಾಲ್ಟ್ ಶಿಲೆಗಳಿಂದ ರೂಪುಗೊಂಡಂತಹವು. ಇನ್ನು ಮೂರನೆಯದು, ಬೆಂಗಳೂರಿನ ಲಾಲ್‌ಬಾಗ್‌ನಲ್ಲಿರುವ ಗೋಪುರದ ಕೆಳಗಿರುವ ಪೆನಿನ್ಸುಲಾರ್ ನೈಸಸ್ ಶಿಲೆಗಳು. ಇವು 300 ಕೋಟಿ ವರ್ಷಗಳ ಹಿಂದೆ ಭೂಮಿಯಿಂದ ಸ್ಫೋಟಗೊಂಡ ಅಗ್ನಿಶಿಲೆಗಳಿಂದ ರೂಪುಗೊಂಡವು.ಹೀಗಿರುವಾಗ, ಸರಿಯಾಗಿ ವಿಷಯ ತಿಳಿದುಕೊಳ್ಳದೆ, ತಜ್ಞರನ್ನು ಮಾತನಾಡಿಸದೇ ಸುದ್ದಿ ಹರಡುವುದು ಸಮಾಜಕ್ಕೆ ಒಳಿತಲ್ಲ.

ADVERTISEMENT

-ಡಾ. ಎಂ.ವೆಂಕಟಸ್ವಾಮಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.