ADVERTISEMENT

ಮುಳುಗಡೆ ಆತಂಕ: ಅಚ್ಚರಿಯ ಸಂಗತಿಯಲ್ಲ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 19:55 IST
Last Updated 1 ನವೆಂಬರ್ 2019, 19:55 IST
cartoon
cartoon   

2050ನೇ ಇಸವಿಯ ವೇಳೆಗೆ ಸಮುದ್ರದ ಮಟ್ಟ ಏರಿಕೆಯಾಗಿ ಮಂಗಳೂರು, ಮುಂಬೈ ಮತ್ತು ಕೋಲ್ಕತ್ತಗಳಿಗೆ ಮುಳುಗಡೆ ಆತಂಕ ಎದುರಾಗಿರುವ ಸುದ್ದಿ ಅಚ್ಚರಿಯದೇನಲ್ಲ. ಜಾಗತಿಕ ತಾಪಮಾನ ಏರಿಕೆಯೇ ಈ ನಗರಗಳ ಮುಳುಗಡೆ ಭೀತಿಗೆ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇಷ್ಟಾದರೂ ಮರಗಳನ್ನು ಕಡಿದು, ಕಾಡಿಗೆ ಬೆಂಕಿ ಹಚ್ಚಿ ಕಾಂಕ್ರೀಟ್ ಕಾಡು ನಿರ್ಮಿಸುವುದು ನಿಂತಿಲ್ಲ. ಈ ಕ್ಷಣದ ನಮ್ಮ ಸುಖಕ್ಕಾಗಿ ಮುಂದಿನ ಪೀಳಿಗೆಯ ಭವಿಷ್ಯವನ್ನು ಅಂಧಕಾರದ ಕೂಪಕ್ಕೆ ನೂಕುತ್ತಿದ್ದೇವೆ. ಮುಂದಿನ ಪೀಳಿಗೆಗೆ ಶುದ್ಧ ನೀರಿಲ್ಲ, ಶುದ್ಧ ಗಾಳಿಯಿಲ್ಲ, ಕೊನೆಗೆ ನೆಲೆ ನಿಲ್ಲಲು ಭೂಮಿಯೂ ಇಲ್ಲದೆ ಅತಂತ್ರರಾಗಲು ಏನೆಲ್ಲಾ ಮಾಡಬಹುದೋ ಅದೆಲ್ಲವನ್ನೂ ಮಾಡಿಬಿಟ್ಟಿದ್ದೇವೆ.

ಭೂಮಿಯ ಬೆಲೆ ಗಗನಕ್ಕೇರಿರುವ ಈ ಮಹಾನಗರಗಳು ಮುಳುಗಡೆಯಾಗುತ್ತವೆ ಎಂದರೆ, ಅದರಿಂದಾಗುವ ನಷ್ಟ ಊಹಿಸಲೂ ಅಸಾಧ್ಯ. ಪರಿಸರಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಲಾಗದ ಹಂತಕ್ಕೆ ತಂದಿಟ್ಟಿದ್ದೇವೆ. ‘ಮಾಡಿದ್ದುಣ್ಣೋ ಮಹರಾಯ’ ಎನ್ನುವ ಗಾದೆಯಂತೆ, ಮನುಷ್ಯ ಇಲ್ಲಿಯವರೆಗೆ ಪ್ರಕೃತಿಯ ಮೇಲೆ ಎಸಗಿರುವ ಅತ್ಯಾಚಾರಕ್ಕೆಲ್ಲಾ ಪ್ರಕೃತಿಯೇ ಉತ್ತರ ನೀಡುವ ಸಮಯ ಬಂದಾಗಿದೆ. ಬಂದದ್ದನ್ನು ಅನುಭವಿಸುವುದೊಂದೇ ಈಗ ನಮಗೆ ಉಳಿದಿರುವ ದಾರಿ.

ಸ್ನೇಹಾ ಕೃಷ್ಣನ್,ಕೊರಟಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.