ADVERTISEMENT

ಶೇ 10 ಮೀಸಲಾತಿ, ಶೇ 90 ಪೂರ್ವಗ್ರಹ! ಆಧಾರರಹಿತ ವಾದ ಸರಣಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 19:30 IST
Last Updated 13 ಜುಲೈ 2022, 19:30 IST
 ದೇವನೂರ ಮಹಾದೇವ
 ದೇವನೂರ ಮಹಾದೇವ   

‘ಶೇ 10 ಮೀಸಲಾತಿ, ಶೇ 90 ಪೂರ್ವಗ್ರಹ!’ ಎಂಬ ಲೇಖನದಲ್ಲಿ ವಾದಿರಾಜ್‌ ಅವರು (ಸಂಗತ, ಜುಲೈ 13), ಕೇಂದ್ರ ಸರ್ಕಾರ ಈಚೆಗೆ ಜಾರಿಗೆ ತಂದ ಶೇ 10 ಮೀಸಲಾತಿಗೆ ಸಂಬಂಧಿಸಿದಂತೆದೇವನೂರ ಮಹಾದೇವ ಅವರು ತಮ್ಮ ‘ಆರ್‌ಎಸ್ಎಸ್ ಆಳ ಮತ್ತು ಅಗಲ’ ಎಂಬ ಪುಸ್ತಕದಲ್ಲಿಬರೆದಿರುವ ಸಾಲೊಂದನ್ನು ಉದಾಹರಿಸಿ ವಾದಿಸಿದ್ದಾರೆ. ‘... ಸಿದ್ದರಾಮಯ್ಯ ಸೇರಿದಂತೆ ಅನೇಕರು ಈ ಮೇಲ್ವರ್ಗದ ಮೀಸಲಾತಿಯ ಬಗ್ಗೆ ಪದೇ ಪದೇ ತಕರಾರು ಎತ್ತುತ್ತಿದ್ದಾರೆ’ ಎಂದು ಹೇಳುವುದರ ಮೂಲಕ, ಈ ಹತ್ತು ಪರ್ಸೆಂಟ್ ಮೀಸಲಾತಿಯನ್ನು ನೀಡಿರುವುದು ‘ಮೇಲ್ವರ್ಗ’ಕ್ಕೆ ಎಂಬುದನ್ನು ಪ್ರತ್ಯಕ್ಷವಾಗಿಯೇ ಒಪ್ಪಿಕೊಂಡಿದ್ದಾರೆ! ಈ ಹೇಳಿಕೆಯ ನಂತರ ಇದನ್ನು ರೈತಾಪಿ ಜನರಿಗೆ ಕೊಟ್ಟಿದ್ದೆಂದು ಆಧಾರರಹಿತವಾಗಿ ಪ್ರತಿಪಾದಿಸಲು ಪ್ರಯತ್ನಿಸಿದ್ದಾರೆ. ಲೇಖನದಲ್ಲಿ ವೈರುಧ್ಯಗಳು ಡಿಕ್ಕಿ
ಹೊಡೆದುಕೊಳ್ಳುತ್ತವೆ!

ದೇವನೂರ ಅವರು ಈ ಶೇ 10 ಮೀಸಲಾತಿ ಕುರಿತು ಕಲ್ಪಿಸಿಕೊಂಡು ಬರೆದಿಲ್ಲ. ಅವರ ಮಾತಿಗೆ ಪೂರಕವಾಗಿ ಇಲ್ಲಿನ ಜಾತಿ ತಾರತಮ್ಯದ ಇತಿಹಾಸ ಮತ್ತು ಸಂವಿಧಾನ ಇದೆ. ಸುಪ್ರೀಂ ಕೋರ್ಟಿನ ತೀರ್ಪುಗಳೂ ಇವೆ. ಸಂವಿಧಾನದ ವಿಧಿ 15(4) ಮತ್ತು 16(4)ರ ಪ್ರಕಾರ, ಮೀಸಲಾತಿ ನೀಡಬೇಕಾದುದು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯ ಆಧಾರದ ಮೇಲೆಯೇ ವಿನಾ ಆರ್ಥಿಕ ಹಿಂದುಳಿದಿರುವಿಕೆಯ ಆಧಾರದ ಮೇಲಲ್ಲ. ಅಂತೆಯೇ ಇಂದಿರಾ ಸಾಹ್ನಿ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ನೀಡಿರುವ ತೀರ್ಪಿನಲ್ಲಿ, ಯಾವುದೇ ಜಾತಿಯನ್ನು ಹಿಂದುಳಿದ ಪಟ್ಟಿಗೆ ಸೇರಿಸಬೇಕಾದರೆ ಅಥವಾ ಅಲ್ಲಿಂದ ತೆಗೆಯಬೇಕಾದರೆ ಹಿಂದುಳಿದ ವರ್ಗಗಳಶಾಶ್ವತ ಆಯೋಗದ ಶಿಫಾರಸು ಬೇಕಾಗುತ್ತದೆ. ಆದರೆ ಇಲ್ಲಿ ಕೇಂದ್ರ ಸರ್ಕಾರ ಸ್ಪಷ್ಟವಾಗಿ ‘ಆರ್ಥಿಕವಾಗಿ ಹಿಂದುಳಿದವರಿಗೆ’ ಎಂದು ಹೇಳುವುದರ ಮೂಲಕ ಸಂವಿಧಾನದ ಮೂಲ ಆಶಯವನ್ನು ಉಲ್ಲಂಘಿಸಿದೆ. ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು ಇಲ್ಲದೆ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಏಕಾಏಕಿ ತೀರ್ಮಾನಿಸಿ ಸುಪ್ರೀಂ ಕೋರ್ಟಿನ ತೀರ್ಪನ್ನೂ ಧಿಕ್ಕರಿಸಿದೆ! ಆರ್ಥಿಕ ಆಧಾರದ ಮೇಲೆ ಮೀಸಲಾತಿ ನೀಡಲು ಸಂವಿಧಾನಕ್ಕೆ ತಿದ್ದುಪಡಿ (103ನೇ ತಿದ್ದುಪಡಿ) ತರಲಾಗಿದೆ.ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ನೀಡಿರುವ ತೀರ್ಪಿನಲ್ಲಿ ‘ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯಾಗುವಂತೆ ಸಂವಿಧಾನಕ್ಕೆ ಯಾವುದೇ ತಿದ್ದುಪಡಿ ತರಬಾರದು’ ಎಂದು ಸ್ಪಷ್ಟಪಡಿಸಲಾಗಿದೆ. ಆದರೂ ಕೇಂದ್ರ ಸರ್ಕಾರ ಈ ತಿದ್ದುಪಡಿ ತಂದಿರುವುದು ಸಂವಿಧಾನಬಾಹಿರ, ಈ ತಿದ್ದುಪಡಿಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿರುವ ಅನೇಕ ಪ್ರಕರಣಗಳು ಸುಪ್ರೀಂ ಕೋರ್ಟ್‌ ಮುಂದೆ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ದೇವನೂರರ ಮಾತುಗಳು ಅಕ್ಷರಶಃ ವಾಸ್ತವ. ಅವರು ಹೇಳಿರುವಂತೆ ಇದು ಸಂವಿಧಾನಕ್ಕೆ ಕೊಟ್ಟಿರುವ ಒಳ ಏಟಲ್ಲದೆ ಬೇರೇನೂ ಅಲ್ಲ.

ಮಿಕ್ಕಂತೆ ವಾದಿರಾಜ್‌ ಅವರು ತಮ್ಮ ವಾದವನ್ನು ಸಮರ್ಥಿಸಲು ಆಧಾರರಹಿತವಾಗಿ ಏನೇನೋ ಹೇಳಲು ತಿಣುಕಾಡಿರುವುದು ಎದ್ದು ಕಾಣುತ್ತದೆ. ಅವರ ಬರಹವನ್ನು ಓದಿದಾಗ, ಅವರ ಹೇಳಿಕೆಯಂತೆಯೇ ಶೇ 90 ಪೂರ್ವಗ್ರಹ ಯಾರದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲವಷ್ಟೆ...

ADVERTISEMENT

⇒ಸಿ.ಎಸ್.ದ್ವಾರಕಾನಾಥ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.