ADVERTISEMENT

25 ವರ್ಷಗಳ ಹಿಂದೆ| ಸೋಮವಾರ, 15–5–1995

​ಪ್ರಜಾವಾಣಿ ವಾರ್ತೆ
Published 14 ಮೇ 2020, 17:31 IST
Last Updated 14 ಮೇ 2020, 17:31 IST

ಪಕ್ಷಕ್ಕೆ ಮರಳಲು ಎಲ್ಲ ಮಾಜಿ ಕಾಂಗ್ರೆಸ್ಸಿಗರಿಗೆ ಷರೀಫ್‌ ಕರೆ

ಬೆಳಗಾವಿ, ಮೇ 14– ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪರ್ಯಾಯವಾಗಿ ತೃತೀಯ ಶಕ್ತಿಯೊಂದನ್ನು ಕಟ್ಟುವ ಭ್ರಮೆ ತೊರೆದು ಜನತಾದಳದ ಸ್ನೇಹಿತರೂ ಸೇರಿದಂತೆ ಎಲ್ಲ ಹಳೆಯ ಕಾಂಗ್ರೆಸ್ಸಿಗರು ಮರಳಿ ತವರುಮನೆಗೆ ಬರಬೇಕು ಎಂದು ರೈಲ್ವೆ ಸಚಿವ ಸಿ.ಕೆ.ಜಾಫರ್‌ ಷರೀಫ್‌ ಇಂದು ಸಂಜೆ ಇಲ್ಲಿ ಆಗ್ರಹಪಡಿಸಿದರು.

ಮೀರಜ್‌– ಲೋಂಡಾ ನಡುವಿನ 188 ಕಿ.ಮೀ ಉದ್ದದ ಬ್ರಾಡ್‌ಗೇಜ್‌ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಇಂದು ಬೆಳಿಗ್ಗೆ ತಾವು ಇದೇ ಮಾತನ್ನು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೂ ಹೇಳಿರುವುದಾಗಿ ತಿಳಿಸಿದರು.

ADVERTISEMENT

ದಳದೊಂದಿಗೆ ಹೊಂದಾಣಿಕೆಗೆ ಸಿದ್ಧ: ಬಂಗಾರಪ್ಪ

ಕಾರವಾರ, ಮೇ 14– ಕಾಂಗೈ ಮತ್ತು ಬಿಜೆಪಿ ಹೊರತುಪಡಿಸಿ ಜನತಾದಳ ಮುಂತಾದ ಜಾತ್ಯತೀತ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ತಾವು ಸಿದ್ಧರಾಗಿರುವುದಾಗಿ ಕೆಸಿಪಿ ಅಧ್ಯಕ್ಷ ಎಸ್‌.ಬಂಗಾರಪ್ಪ ಇಂದು ಶಿರಸಿಯಲ್ಲಿ ತಿಳಿಸಿದರು.

ಈಗ ಕಾಂಗೈಗೆ ಭವಿಷ್ಯವಿಲ್ಲ. ಪ್ರಧಾನಿ ಪಿ.ವಿ.ನರಸಿಂಹರಾವ್‌ ನೇತೃತ್ವದ ಕಾಂಗೈ ಸರ್ಕಾರ ಹಾಳಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಶಾಂತಿ ನೆಲೆಸುವ ಸಂಭವವಿಲ್ಲ. ಆದ್ದರಿಂದ ಕಾಂಗೈ ಮತ್ತು ಬಿಜೆಪಿ ಬಿಟ್ಟು ಉಳಿದ ಯಾವುದೇ ಪಕ್ಷದ ಜೊತೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.