ADVERTISEMENT

ಅಜ್ಞಾನದ ಪ್ರದರ್ಶನ!

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST

‘ಪ್ರಕಾಶ್‌ ರೈ ಮಾತನಾಡಿದ್ದ ಸ್ಥಳ ಸ್ವಚ್ಛತೆ’ (ಪ್ರ.ವಾ., ಜ.16) ವರದಿ ಓದಿ ಬೇಸರ ವೆನಿಸಿತು. ಇಂದಿನ ತಂತ್ರಜ್ಞಾನ ಯುಗದಲ್ಲೂ ಇಂತಹ ಅರ್ಥವಿಲ್ಲದ ಕಾರ್ಯಕ್ರಮಗಳು ನಡೆಯುತ್ತಿರುವುದು ಆತಂಕ ಮೂಡಿಸುತ್ತದೆ. ಪ್ರಕಾಶ್‌ ರೈ ಅವರು ಆಡಿದ ಮಾತುಗಳು ಅಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ಹಿಡಿಸಲಿಲ್ಲ ಎಂದಾದರೆ, ಅವುಗಳನ್ನು ಅಲಕ್ಷಿಸಬೇಕಿತ್ತು. ಇಲ್ಲವೇ ಅವರ ಮಾತುಗಳಿಗೆ ತಕ್ಕ ಉತ್ತರ ಕೊಡಬೇಕಿತ್ತು. ಅದನ್ನು ಬಿಟ್ಟು ಮಠದ ಆವರಣ ತೊಳೆದರೆ ಏನಾಗಬಲ್ಲದು?

ಯಾರಾದರೂ ವೈಜ್ಞಾನಿಕವಾಗಿ, ವೈಚಾರಿಕವಾಗಿ ಆಲೋಚಿಸಿ ಮಾತನಾಡಿದರೆ ಸಾಕು, ಅಂಥವರ ಬಗ್ಗೆ ‘ಸ್ವಯಂಘೋಷಿತ ಬುದ್ಧಿಜೀವಿ, ಸೋಗಲಾಡಿ ಬುದ್ಧಿಜೀವಿ’ ಎಂದು ವ್ಯಂಗ್ಯವಾಡುವುದು ಇತ್ತೀಚಿಗೆ ಬೆಳೆದ ಅಪಾಯಕಾರಿ ಬೆಳವಣಿಗೆಯಾಗಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಇಂಥದ್ದೇ ಘಟನೆ ಅಂಬೇಡ್ಕರ್ ಅವರಿಗೂ ಎದುರಾಗಿತ್ತು. ಅಂಬೇಡ್ಕರ್ ಅವರು ‘ಮಹಾಡ್’ ಕೆರೆಯ ನೀರನ್ನು ಬಳಸಿದ ನಂತರ, ಜಾತಿವಾದಿ ಜನರು ಆ ಕೆರೆಯ ನೀರನ್ನು ಹಸುವಿನ ಸಗಣಿ ಮತ್ತು ಗಂಜಲದಿಂದ ಶುಚಿಗೊಳಿಸಿದ್ದರು.

ADVERTISEMENT

ಸೋಮವಾರ ಶಿರಸಿಯಲ್ಲಿ ನಡೆದ ‘ಶುದ್ಧೀಕರಣ’ ಘಟನೆ, ಆ ಜನರ ಅಜ್ಞಾನವನ್ನು ಪ್ರದರ್ಶಿಸುವಂತಿದೆ. ಮೇಲಾಗಿ ಸಂವಿಧಾನವನ್ನೇ ಅತಂತ್ರಗೊಳಿಸುವ ಹುನ್ನಾರ ನಡೆದಿದೆ ಎಂಬ ಅನುಮಾನ ಮೂಡುತ್ತಿದೆ.

ಶಿವರಂಜನ್ ಸತ್ಯಂಪೇಟೆ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.