ADVERTISEMENT

ಆಯ್ಕೆಯ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 19:30 IST
Last Updated 23 ಜನವರಿ 2018, 19:30 IST

ಕಳೆದ ತಿಂಗಳು ಪ್ರಕಟವಾದ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳ ಬಗ್ಗೆ ಬಿ.ಎಂ. ಚಂದ್ರಶೇಖರಯ್ಯ ಅವರು ‘ಮಾನದಂಡ ಏನು?’ (ವಾ.ವಾ., ಜ. 9) ಎಂದು ಪ್ರಶ್ನಿಸಿದ್ದಾರೆ.

‘ಇಂತಹ ಪ್ರಶಸ್ತಿಗಳನ್ನು ಪ್ರಸಿದ್ಧರಾದವರು ತಮ್ಮ ತಮ್ಮಲ್ಲೇ ಹಂಚಿಕೊಳ್ಳುತ್ತಾರೆ’ ಎಂದು ಅವರು ಹೇಳಿದ್ದಾರೆ. ಅಕಾಡೆಮಿಯು ಅಂತರ್ಜಾಲದಲ್ಲಿ ಲಭ್ಯವಿರುವ ತನ್ನ ಜಾಲತಾಣದಲ್ಲಿ (sahitya-akademi.gov.in), ‘ಪ್ರಶಸ್ತಿ ಪಡೆಯುವ ಕೃತಿಯು ಆಯಾ ಭಾಷಾ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯಾಗಿರಬೇಕು’ ಎಂದು ಹೇಳಿದೆ.

ಅಕಾಡೆಮಿಯು ಸೃಜನಶೀಲ ಕೃತಿಗಳಿಗೆ ಕೊಡುವ ಪ್ರಶಸ್ತಿಗೆ ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಆತ್ಮಕತೆ, ಜೀವನ ಚರಿತ್ರೆ, ಲಲಿತ ಪ್ರಬಂಧ, ಅಂಕಣ ಬರಹಗಳು ಇತ್ಯಾದಿ ವಿವಿಧ ಬಗೆಯ ರಚನೆಗಳನ್ನು ಪರಿಶೀಲಿಸಲಾಗುತ್ತದೆ. ಅವುಗಳಿಗೆಲ್ಲಾ ಒಂದೇ ರೀತಿಯ ಮಾನದಂಡ ಉಪಯೋಗಿಸುವುದು ಕಷ್ಟ ಎಂಬುದು ಸ್ಪಷ್ಟ. ಈ ಬಾರಿಯ ಸೃಜನಶೀಲ ಕೃತಿಯ ಆಯ್ಕೆಗೆ ಕೊನೆಯ ಹಂತದಲ್ಲಿ ನಿರ್ಣಾಯಕರಾಗಿದ್ದವರು ಡಾ. ಜಿ.ಎಂ. ಹೆಗಡೆ, ಡಾ. ಶಾಂತಾ ಇಮ್ರಾಪುರ ಮತ್ತು ಡಾ. ಶಿವರಾಮ ಪಡಿಕ್ಕಲ್. ಈ ಮೂವರೂ ವಿದ್ವತ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು.

ADVERTISEMENT

ಅಕಾಡೆಮಿಯ ಜಾಲತಾಣದಲ್ಲಿ ಈ ಪ್ರಶಸ್ತಿಗೆ ಕೃತಿಯನ್ನು ಮೂರು ಹಂತದಲ್ಲಿ ಆಯ್ಕೆ ಮಾಡಬೇಕೆಂದು ನಿಯಮಗಳನ್ನು ಕೊಡಲಾಗಿದೆ. ಪ್ರಶಸ್ತಿಗೆ ಆಯ್ಕೆ ನಡೆಯುವ ವರ್ಷದ ಹಿಂದಿನ ವರ್ಷವನ್ನು ಬಿಟ್ಟು ಅದರ ಹಿಂದಿನ ಐದು ವರ್ಷಗಳಲ್ಲಿ ಪ್ರಕಟವಾದ ಕೃತಿಗಳಿಂದ ಆಯ್ಕೆ ನಡೆಯುತ್ತದೆ. ಅಂದರೆ 2017ರ ಪ್ರಶಸ್ತಿಗಾಗಿ 2011 ರಿಂದ 2015 ರೊಳಗಿನ ಐದು ವರ್ಷಗಳಲ್ಲಿ ಪ್ರಕಟವಾದ ಕೃತಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

ಮೊದಲಿಗೆ ಆಯಾ ಭಾಷಾ ಸಾಹಿತ್ಯದ ಹತ್ತು ಜನರ ಸಲಹಾ ಮಂಡಳಿಯು ಐದು ಜನ ಪರಿಣತರ ಹೆಸರನ್ನು ಅಕಾಡೆಮಿಯ ಅಧ್ಯಕ್ಷರಿಗೆ ಕಳಿಸುತ್ತದೆ. ಅಧ್ಯಕ್ಷರು ಇವರಲ್ಲಿ ಇಬ್ಬರನ್ನು ಆಯ್ಕೆ ಮಾಡುತ್ತಾರೆ. ಈ ಪರಿಣತರು ಮೇಲೆ ಹೇಳಿದ ಐದು ವರ್ಷಗಳಲ್ಲಿ ಪ್ರಕಟವಾದ ಕೃತಿಗಳಿಂದ ಗಮನಾರ್ಹ ಕೃತಿಗಳ ಪಟ್ಟಿಗಳನ್ನು ತಯಾರಿಸುತ್ತಾರೆ. ಇದನ್ನು ‘ಗ್ರೌಂಡ್ ಲಿಸ್ಟ್’ ಎಂದು ಗುರುತಿಸಲಾಗುತ್ತದೆ.

ಹೀಗೆ ತಯಾರಾದ ‘ಗ್ರೌಂಡ್ ಲಿಸ್ಟ್’ನಿಂದ ಸಲಹಾ ಸಮಿತಿಯ ಹತ್ತು ಸದಸ್ಯರು ತಲಾ ಎರಡು ಕೃತಿಗಳನ್ನು ಆಯ್ಕೆ ಮಾಡಬೇಕು. ಈ ಸದಸ್ಯರು ಈ ಪಟ್ಟಿಯಲ್ಲಿಲ್ಲದ ಕೃತಿಗಳನ್ನು ಕೂಡ ಆಯ್ಕೆ ಮಾಡಬಹುದು.

ಸಲಹಾ ಸಮಿತಿಯ ಸದಸ್ಯರು ಆಯ್ಕೆ ಮಾಡಿದ ಕೃತಿಗಳ ಪಟ್ಟಿಯನ್ನು ಹತ್ತು ಜನ ರೆಫ್ರಿಗಳಿಗೆ ಕಳಿಸಲಾಗುತ್ತದೆ. ಈ ರೆಫ್ರಿಗಳು ತಮಗೆ ನೀಡಲಾದ ಪಟ್ಟಿಯಲ್ಲಿರುವ ಕೃತಿಗಳಿಂದ ಎರಡು ಕೃತಿಗಳನ್ನು ಆಯ್ಕೆ ಮಾಡಬೇಕು. ರೆಫ್ರಿಗಳು ತಮಗೆ ಕೊಡಲಾದ ಪಟ್ಟಿಯಲ್ಲಿಲ್ಲದ ಕೃತಿಗಳನ್ನು ಕೂಡ ಸೂಚಿಸಬಹುದು.

ಈ ಹತ್ತು ರೆಫ್ರಿಗಳು ಆಯ್ಕೆ ಮಾಡಿದ ಕೃತಿಗಳನ್ನು ಅಕಾಡೆಮಿಯು ಕೊಂಡುಕೊಂಡು ಮೂರು ಜನ ಜೂರಿಗಳಿಗೆ ಕಳಿಸಿ ಕೊಡುತ್ತದೆ. ಅವರು ಬಹುಮತದಿಂದ ಪ್ರಶಸ್ತಿಗೆ ಕೃತಿಯನ್ನು ಆಯ್ಕೆ ಮಾಡುತ್ತಾರೆ. ಮೇಲೆ ಹೇಳಿದ ರೆಫ್ರಿಗಳನ್ನು ಮತ್ತು ಕೊನೆಯ ಹಂತದ ನಿರ್ಣಾಯಕರನ್ನು ಭಾಷಾ ಸಲಹಾ ಸಮಿತಿಯ ಸಲಹೆ ಪಡೆದು ಅಕಾಡೆಮಿಯ ಅಧ್ಯಕ್ಷರು ನೇಮಕ ಮಾಡುತ್ತಾರೆ. ಪೂರ್ತಿ ವಿವರಗಳಿಗೆ ಅಕಾಡೆಮಿಯ ಜಾಲತಾಣವನ್ನು ನೋಡಬಹುದು.

– ಗಿರೀಶ್ ವಿ. ವಾಘ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.